ಕುಶಾಲನಗರ, ಅ. 4: ಹಾರಂಗಿ ಜಲಾಶಯದಿಂದ ಒಟ್ಟು 5500 ಕ್ಯೂಸೆಕ್ ಪ್ರಮಾಣದ ನೀರು ಹೊರ ಹರಿಸಲಾಗುತ್ತಿದೆ. ರಾಜ್ಯ ಸರಕಾರದ ಸೂಚನೆಯಂತೆ ಸೋಮವಾರ ರಾತ್ರಿಯಿಂದ ನದಿಗೆ 4 ಸಾವಿರ ಕ್ಯೂಸೆಕ್ ಮತ್ತು ಕಾಲುವೆ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ ರೈತರ ಬೆಳೆಗೆ 1500 ಕ್ಯೂಸೆಕ್ ಪ್ರಮಾಣದ ನೀರು ಹರಿಯುತ್ತಿದೆ.

ಜಲಾಶಯಕ್ಕೆ ಪ್ರಸಕ್ತ 500 ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದ್ದು ,ಜಲಾಶಯದ ನೀರಿನ ಮಟ್ಟ 2853.59 ಅಡಿಗಳಾಗಿವೆ. ಕಳೆದ ರಾತ್ರಿಯಿಂದ 1 ಅಡಿಗಳಷ್ಟು ನೀರು ಹೊರ ಹರಿದಿದೆ ಎಂದು ಅಣೆಕಟ್ಟೆ ಮೂಲಗಳು ತಿಳಿಸಿವೆ. ಜಲಾಶಯದಲ್ಲಿ ಬಳಕೆ ಮಾಡುವ ನೀರಿನ ಪ್ರಮಾಣ ಮಂಗಳವಾರ ಸಂಜೆಯ ವೇಳೆಗೆ 5.96 ಟಿಎಂಸಿ ಸಂಗ್ರಹವಿದೆ. ಕಳೆದ ತಿಂಗಳು ಒಟ್ಟು 3 ಟಿಎಂಸಿ ನೀರು ಜಲಾಶಯದಿಂದ ಹೊರ ಹರಿಸಲಾಗಿತ್ತು. ನಂತರ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆಯಲ್ಲಿ 3.5 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳೆ ವೀಕ್ಷಣೆಗೆ ಕೇಂದ್ರ ತಂಡ ಭೇಟಿ: ಕೇಂದ್ರದಿಂದ ತಜ್ಞರ ಸಮಿತಿಯೊಂದು ತಾ. 5 ರಂದು (ಇಂದು) ಹಾರಂಗಿಗೆ ಭೇಟಿ ನೀಡಿ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಬೆಳೆ ವೀಕ್ಷಣೆ ನಡೆಸಲಿದೆ. ಕೇಂದ್ರ ಸರಕಾರದಿಂದ ಆಗಮಿಸುವ ಸಮಿತಿ ಹೇಮಾವತಿ ಮತ್ತು ಹಾರಂಗಿ ಸೇರಿದಂತೆ ವಿವಿಧೆಡೆ ಯೋಜನಾ ವ್ಯಾಪ್ತಿಯ ಬೆಳೆ ವೀಕ್ಷಣೆ ನಡೆಸಲಿದೆ ಎಂದು ಅಣೆಕಟ್ಟೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.