ಕುಶಾಲನಗರ, ಸೆ.18 : ಹಾರಂಗಿ ಜಲಾಶಯದಿಂದ ಕಳೆದ 11 ದಿನಗಳ ಅವಧಿಯಲ್ಲಿ 11 ಅಡಿಗಳಷ್ಟು ಪ್ರಮಾಣದ ನೀರು ಬರಿದಾಗಿದೆ. ಜಲಾಶಯದಿಂದ 2 ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ನದಿಗೆ ಮತ್ತು 1900 ಕ್ಯೂಸೆಕ್ಸ್ ಕಾಲುವೆಗೆ ಹರಿಸಲಾಗುತ್ತಿದ್ದು, ಇದೀಗ ಜಲಾಶಯದಲ್ಲಿ ನೀರಿನ ಮಟ್ಟ 2842.47 ಕಂಡುಬಂದಿದೆ. ಕಳೆದ 2 ದಿನಗಳಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಅಧಿಕಗೊಂಡಿದೆ ಎಂದು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಂ.ಎನ್ ಚಂದ್ರ ಕುಮಾರ್ ತಿಳಿಸಿದ್ದಾರೆ.
ಕಳೆದ ಬಾರಿ ಜಲಾಶಯದಲ್ಲಿ ಇದೇ ಅವಧಿಯಲ್ಲಿ 6.67 ಟಿಎಂಸಿ ನೀರಿನ ಸಂಗ್ರಹ ಇತ್ತು. ಭಾನುವಾರ ಸಂಜೆ ವೇಳೆಗೆ ಜಲಾಶಯದಲ್ಲಿ ಬಳಕೆ ಮಾಡಬಹುದಾದ ನೀರಿನ ಸಂಗ್ರಹ ಪ್ರಮಾಣ 3.7 ಟಿಎಂಸಿ ಕಂಡು ಬಂದಿದೆ. ಇದೇ ರೀತಿ ಮುಂದು ವರಿದಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸದ್ಯದಲ್ಲಿಯೇ ಬೆಳೆಗೆ ನೀರಿನ ಅಭಾವ ಎದುರಿಸಬೇಕಾಗುತ್ತದೆ ಎನ್ನುವದು ಈ ಭಾಗದ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳ ಅಳಲಾಗಿದೆ. ಈ ಸಾಲಿನಲ್ಲಿ 1 ಬಾರಿ ಮಾತ್ರ ಜಲಾಶಯ ಭರ್ತಿಯಾಗಿದ್ದು, ನಂತರ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಎದುರಾಗಿರುವದು ಈ ಪರಿಸ್ಥಿತಿಗೆ ಕಾರಣವಾಗಿದೆ.
ಇನ್ನೊಂದೆಡೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ನದಿಗೆ ನೀರು ಹರಿಸುತ್ತಿರುವದು ಜಲಾಶಯ ಬರಿದಾಗಲು ಮತ್ತೊಂದು ಕಾರಣವಾಗಿದೆ. ಈ ಬಾರಿ ನವೆಂಬರ್ ಪ್ರಾರಂಭದಿಂದಲೇ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗುವ ಸಂಭವ ಬಹುತೇಕ ಖಚಿತ ಎನ್ನುವದು ನೀರಾವರಿ ಇಲಾಖಾ ಅಧಿಕಾರಿಗಳ ಮಾಹಿತಿಯಾಗಿದೆ. ಈ ತಿಂಗಳ 20ರ ನಂತರ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ಈ ಬಗ್ಗೆ ಚರ್ಚೆ ನಡೆಯುವದು ಎಂದು ಅಣೆಕಟ್ಟು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಹಾರಂಗಿ ಜಲಾಶಯದ ಆವರಣದಲ್ಲಿ ಇರುವ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ ನದಿಗೆ ಹಾಗೂ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಈ ಮೂಲಕ ವಿದ್ಯುತ್ ಉತ್ಪಾದನೆ ನಡೆಯತ್ತಿದೆ. ಈ ಬಾರಿ ನೀರಿನ ಅಭಾವದಿಂದ ವಿದ್ಯುತ್ ಉತ್ಪಾದನಾ ಗುರಿ ಹೊಂದಲು ಕಷ್ಟಕರವಾಗಲಿದೆ ಎಂದಿರುವ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಶಿವಸುಬ್ರಮಣ್ಯಂ 2 ಘಟಕಗಳ ಮೂಲಕ ಕೇವಲ 15 ಮಿಲಿಯನ್ ಯೂನಿಟ್ ಉತ್ಪಾದನೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.