ಕುಶಾಲನಗರ, ಸೆ. 8: ಹಾರಂಗಿ ಜಲಾಶಯದಿಂದ 2 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಯುತ್ತಿದ್ದು ಇದೀಗ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 2 ಅಡಿಗಳಷ್ಟು ಕಡಿಮೆಯಾಗಿದೆ. ಮಂಗಳವಾರ ರಾತ್ರಿಯಿಂದ ನದಿಗೆ ನೀರು ಹರಿಸಲಾಗುತ್ತಿದ್ದು ಗುರುವಾರ ಸಂಜೆಯ ವೇಳೆಗೆ ನದಿಯಲ್ಲಿ ನೀರಿನ ಮಟ್ಟ 2852 ಅಡಿಗಳಿಗೆ ಇಳಿದಿದೆ. ಕಾಲುವೆಗೆ 1900 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಯುತ್ತಿದ್ದು ನದಿಗೆ 2 ಸಾವಿರ ಕ್ಯೂಸೆಕ್ಸ್ ಹರಿಸಲಾಗುತ್ತಿದೆ.

ಜಲಾಶಯಕ್ಕೆ ಒಳಹರಿವು 1262 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಎಂದು ಹಾರಂಗಿ ಅಣೆಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿ ನೀರು ಹರಿಸಿದಲ್ಲಿ ಈ ಬಾರಿ ಬೇಸಿಗೆ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ನೀರಿನ ಅಭಾವ ಎದುರಾಗುವ ಸಾಧ್ಯತೆ ಅಧಿಕವಾಗಿದೆ.

ಮುಂದಿನ ವಾರದಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಮಡಿಕೇರಿಯಲ್ಲಿ ನಡೆಯಲಿದ್ದು, ಜಲಾಶಯದ ನೀರಿನ ಸಂಗ್ರಹ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೀರಿನ ಕೊರತೆಯಿಂದ ಬೇಸಿಗೆ ಬೆಳೆಗೆ ನೀರು ಒದಗಿಸಲು ಸಂಕಷ್ಟ ಹಿನ್ನೆಲೆಯಲ್ಲಿ ಬೆಳೆ ಪರಿಹಾರದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.