ಶನಿವಾರಸಂತೆ, ಜು. 21: ರೋಟರಿ ಸಂಸ್ಥೆ ಸಾಕ್ಷರತೆಗೆ ಪ್ರಾಮುಖ್ಯತೆ ನೀಡುತ್ತಿದೆ. ಶಾಲೆಗಳ ಅಭಿವೃದ್ಧಿ ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಾಕ್ಷರರಲ್ಲದ ವಯಸ್ಕರಿಗೂ ಶಿಕ್ಷಣ ನೀಡಲು ಸ್ವಯಂ ಸೇವಕರೊಂದಿಗೆ ಒಡಂಬಡಿಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಲಯ ಆರರ ಸಹಾಯಕ ಗವರ್ನರ್ ಡಾ. ಪ್ರಶಾಂತ್ ಹೇಳಿದರು.
ಸಮೀಪದ ಹಾರೆಹೊಸೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಪಡೆದಿರುವ ಹಾಡಿಯ ಮಕ್ಕಳಿಗೆ ಸೋಮವಾರ ಪೇಟೆ ರೋಟರಿ ಹಿಲ್ ವತಿಯಿಂದ ಉಚಿತವಾಗಿ ನೀಡಿದ ಸ್ಕೂಲ್ ಕಿಟ್ ವಿತರಣಾ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯೆ- ಬುದ್ಧಿ ಇದ್ದರೆ ಪ್ರತಿ ಮಗುವೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ಸ್ಥಾಪಕ ಅಧ್ಯಕ್ಷ ಹಾಗೂ ‘ಶಕ್ತಿ' ದಿನಪತ್ರಿಕೆ ಸಂಪಾದಕ ಬಿ.ಜಿ. ಅನಂತಶಯನ ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳ ಭವ್ಯ ಭವಿಷ್ಯಕ್ಕೆ ಪ್ರಾಥಮಿಕ ಹಂತದ ಶಿಕ್ಷಣವೇ ಭದ್ರ ಬುನಾದಿ. ಮಕ್ಕಳ ಬಾಲ್ಯದ ಆಸೆಗಳು ಈಡೇರಲು, ಕಂಡ ಕನಸುಗಳು ನನಸಾಗಲು ಶಿಕ್ಷಣ ದಾರಿದೀಪವಾಗಿದೆ ಎಂದರು.
ಮತ್ತೋರ್ವ ಸದಸ್ಯ ಕೆ.ವಿ. ಬಿದ್ದಪ್ಪ ಮಾತನಾಡಿ, ಬೆಲೆ ಕಟ್ಟಲಾಗದ ಸಂಪತ್ತು ವಿದ್ಯೆ. ಉತ್ತಮ ಗುರುಗಳ ಪರಿಶ್ರಮಕ್ಕೆ ವಿದ್ಯಾರ್ಥಿಗಳು ಕಲಿಕಾ ಪ್ರಗತಿಯ ಕಾಣಿಕೆ ನೀಡಬೇಕು ಎಂದರು.
ಶಿಕ್ಷಕರಾದ ಟಿ.ಆರ್. ಕವಿತಾ, ಸುಂದರ್, ಕಮಲಾಕ್ಷಿ ಹಾಗೂ ಕುಡ್ಲೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸ್ನೇಹಾ ಬಸಮ್ಮ ಮಾತನಾಡಿ, ಪ್ರತಿದಿನ ಹಾಡಿಗೆ ಹೋಗಿ ಮಕ್ಕಳ ಮನವೊಲಿಸಿ ಶಾಲೆಗೆ ಕರೆತರುವದು ಹಾಗೂ ಅವರನ್ನು ಸಂಭಾಳಿಸುವದು ಪರಿಶ್ರಮದ ಕೆಲಸ. ರೋಟರಿ ಮತ್ತಿತರ ಸಂಘ - ಸಂಸ್ಥೆಗಳು ನೀಡುತ್ತಿರುವ ಸೌಲಭ್ಯ ಹಾಡಿಯ ಮಕ್ಕಳನ್ನು ಆಕರ್ಷಿಸುವಲ್ಲಿ ಸಹಕಾರಿಯಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ರೋಟರಿ ಹಿಲ್ ಅಧ್ಯಕ್ಷ ಭರತ್ ಭೀಮಯ್ಯ ಮಾತನಾಡಿ, ಇಂದಿನ ಮಕ್ಕಳು ಶಿಕ್ಷಣ ಪಡೆದು ನಾಳಿನ ಸಮಾಜದ ಉತ್ತಮ ನಾಗರಿಕ ರಾಗಲಿ ಎಂಬ ಸದುದ್ದೇಶದಿಂದ ಶಿಕ್ಷಣ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಶಿಕ್ಷಕರು ಮತ್ತಷ್ಟು ಮುತುವರ್ಜಿ ವಹಿಸಿ ಹಾಡಿಯ ಮಕ್ಕಳ ಮನವೊಲಿಸಿ ಶಾಲೆಗೆ ಕರೆತರಬೇಕು ಎಂದರು.ರೋಟರಿ ಮಾಜಿ ಅಧ್ಯಕ್ಷ ಮೋಹನ್ ರಾವ್ ನಿರೂಪಿಸಿದರು. ಮುಖ್ಯ ಶಿಕ್ಷಕಿ ಲಲಿತಾ ಸ್ವಾಗತಿಸಿದರು. ಶಿಕ್ಷಕಿ ಕಮಲಾಕ್ಷಿ ವಂದಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯೆ ರಜನಿ ಉಪಸ್ಥಿತರಿದ್ದರು.