ಕೂಡಿಗೆ, ಅ. 10: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ವ್ಯಾಪ್ತಿಯ ಸಮೀಪ ವಿರುವ ಹುಣಸೆಪಾರೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಗಿರಿಜನ ಹಾಡಿಯ ಆಯ್ದ 10 ಕುಟುಂಬ ದವರಿಗೆ ಎರಡೂವರೆ ವರ್ಷ ಪ್ರಾಯದ ಆಡು, ಕುರಿಗಳನ್ನು ಬಸವನಹಳ್ಳಿಯ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ವಿತರಣೆ ಮಾಡಿದರು.
ನಂತರ ಮಾತನಾಡುತ್ತಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗಿರಿಜನರ ಅಭಿವೃದ್ಧಿಗೆ ವಿವಿಧ ಯೋಜನೆಗಳಿದ್ದು, ಈ ಯೋಜನೆಗಳು ಕೆಳಮಟ್ಟದ ಹಂತದವರೆಗೆ ತಲಪಿ ಇದರ ಪ್ರಯೋಜನವನ್ನು ಹಾಡಿಯ ಜೇನುಕುರುಬರು ಹಾಗೂ ಗಿರಿಜನ ಕುಟುಂಬಸ್ಥರು ಸದುಪಯೋಗ ಪಡಿಸಿಕೊಳ್ಳುವದರ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿ ಕೊಳ್ಳಬೇಕು ಎಂದರು. ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡುತ್ತಾ, ಗಿರಿಜನರ ವಿವಿಧ ಯೋಜನೆಗಳು ಸದ್ಬಳಕೆಯಾಗದೇ ಜಿಲ್ಲಾ ಮಟ್ಟದಿಂದ ವರ್ಷದ ಕೊನೆಯಲ್ಲಿ ಹಣ ವಾಪಾಸ್ಸು ಹೋಗುವಂತಹ ಪ್ರಸಂಗ ನಡೆಯ ದಂತೆ ಇರುವ ಹಾಡಿಗಳ ಜನರನ್ನು ಉತ್ತಮ ಬದುಕು ಕಟ್ಟಿಕೊಳ್ಳಲು ಹೈನುಗಾರಿಕೆಯ ಮೂಲಕ ಮುನ್ನಡೆಸಬೇಕೆಂದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮೇಗೌಡ, ಇಲಾಖೆಯ ಯೋಜನೆಗಳ ಬಗ್ಗೆ ಹಾಗೂ ಹುಣಸೆಪಾರೆ ಹಾಡಿಯ ಹತ್ತು ಪುರುಷರಿಗೆ ರೂ. 10 ಸಾವಿರ ಹಾಗೂ ಹತ್ತು ಮಹಿಳೆಯರಿಗೆ ರೂ. 15,000 ವೆಚ್ಚದ ಆಡು-ಕುರಿಗಳನ್ನು ವಿತರಣೆ ಮಾಡಿದ ಮಾಹಿತಿಯನ್ನು ವಿವರಿಸಿದರು.
ವೇದಿಕೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯೆಆದ ಚಂದ್ರಿಕಾ, ಜಯಶ್ರೀ, ಪುಷ್ಪ, ದಸ್ವಿಕೃಷ್ಣ, ಗ್ರಾ.ಪಂ. ಮಾಜಿ ಸದಸ್ಯ ಅರುಣ್‍ರಾವ್ ಸೇರಿದಂತೆ ಫಲಾನುಭವಿಗಳು ಹಾಜರಿದ್ದರು.