ಸೋಮವಾರಪೇಟೆ, ಜ. 5: ಇಲ್ಲಿನ ಡಾಲ್ಫಿನ್ಸ್ ಸ್ಫೋಟ್ರ್ಸ್ ಕ್ಲಬ್ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ.ಸುನಿಲ್ ಅವರ ತಂದೆ ದಿ. ವಿಠಲಾಚಾರ್ಯ ಸ್ಮಾರಕ ಜಿಲ್ಲಾ ಮಟ್ಟದ ಆಹ್ವಾನಿತ ಹಾಕಿ ಪಂದ್ಯಾಟ ತಾ. 6 ರಿಂದ (ಇಂದಿನಿಂದ) ತಾ. 8ರ ವರೆಗೆ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಪ್ರತಿಷ್ಠಿತ ತಂಡಗಳ ನಡುವಿನ ಹಾಕಿ ಪಂದ್ಯಾಟಕ್ಕೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನ ಸಜ್ಜುಗೊಂಡಿದ್ದು, ಸ್ಪೋಟ್ರ್ಸ್ ಕ್ಲಬ್ನ ಪದಾಧಿಕಾರಿಗಳು ಮೈದಾನವನ್ನು ಸುಸಜ್ಜಿತಗೊಳಿಸಿದ್ದಾರೆ.
ಹಾಕಿ ಕೂರ್ಗ್ನ ನೋಂದಾಯಿತ ತಂಡಗಳಾದ ಆತಿಥೇಯ ಡಾಲ್ಫಿನ್ಸ್ ಸ್ಫೋಟ್ರ್ಸ್ ಕ್ಲಬ್, ಬಿಬಿಸಿ ಗೋಣಿಕೊಪ್ಪ, ಯುಎಸ್ಸಿ ಬೇರಳಿನಾಡು ರೆಡ್, ಚಾರ್ಮರ್ಸ್ ಮಡಿಕೇರಿ, ಹಾಕತ್ತೂರು ಸ್ಫೋಟ್ರ್ಸ್ ಕ್ಲಬ್, ಟವರ್ಸ್ ವೀರಾಜಪೇಟೆ, ಎಸ್ಆರ್ಸಿ ಕಾಕೋಟುಪರಂಬು, ಎಂಆರ್ಎಫ್ ಮೂರ್ನಾಡು ತಂಡಗಳು ಭಾಗವಹಿಸಲಿವೆ.
ತಾ. 6 ರಂದು (ಇಂದು) ಬೆಳಿಗ್ಗೆ 9.45ಕ್ಕೆ ಶಾಸಕ ಅಪ್ಪಚ್ಚು ರಂಜನ್ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕ್ಲಬ್ನ ಅಧ್ಯಕ್ಷ ಎಚ್.ಎನ್. ಅಶೋಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪರಾಜೇಶ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಚೌಡ್ಲು ಗ್ರಾಪಂ ಅಧ್ಯಕ್ಷೆ ವನಜ ಸೇರಿದಂತೆ ಅನೇಕ ಗಣ್ಯರು, ರಾಜಕೀಯ ಪಕ್ಷಗಳ ಮುಖಂಡರು, ಕ್ರೀಡಾಕೂಟದ ದಾನಿಗಳು ಭಾಗವಹಿಸಲಿದ್ದಾರೆ.
ತಾ. 8ರ ಸಂಜೆ 3ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಸರ್ಕಾರದ ಮೀನುಗಾರಿಕೆ ಹಾಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಪ್ರಮೋದ್ ಮಧ್ವರಾಜ್ ಬಹುಮಾನ ವಿತರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕುಶಾಲನಗರ ಎಸ್ಎಲ್ಎನ್ ಕಾಫಿಯ ಸಾತಪ್ಪನ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಹಾಕಿ ಕೂರ್ಗ್ ಅಧ್ಯಕ್ಷ ಕಾಳಯ್ಯ, ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ, ಒಲಂಪಿಯನ್ ಎಸ್.ವಿ. ಸುನಿಲ್, ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ವಿ.ಆರ್. ರಘುನಾಥ್, ಆರ್.ವಿ. ರಘು ಪ್ರಸಾದ್, ಪಿ.ಆರ್. ಶ್ರೀಜೇಶ್, ವಿಕ್ರಂಕಾಂತ್, ಅರ್ಜುನ್ ಹಾಲಪ್ಪ, ಎಸ್.ವಿ. ವಿನಯ್, ಹರಿಪ್ರಸಾದ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.