ಗೋಣಿಕೊಪ್ಪಲು, ಡಿ. 5 : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಮಂಡೇಪಂಡ ಸುಬ್ರಮಣ್ಯ ಜ್ಞಾಪಕಾರ್ಥ ಹಾಕಿ ಪಂದ್ಯಾವಳಿಯಲ್ಲಿ ಹೈಯರ್ ಪ್ರೈಮರಿ ಬಾಲಕರಲ್ಲಿ ಲಯನ್ಸ್, ಕೊಡಗು ವಿದ್ಯಾಲಯ ಹಾಗೂ ಸಂತ ಅನ್ನಮ್ಮ ತಂಡಗಳು ಗೆಲುವು ಸಾಧಿಸಿವೆ.
ಲಯನ್ಸ್ ತಂಡವು ಪ್ರಥಮ ಸುತ್ತಿನಲ್ಲಿ ಅರಮೇರಿ ಎಸ್‍ಎಂಎಸ್ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು. ಲಯನ್ಸ್ ಪರ ಸುಬ್ಬಯ್ಯ 14 ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲು ಗೆಲುವಿಗೆ ಕಾರಣವಾಯಿತು. 2 ನೇ ಸುತ್ತಿನ ಪಂದ್ಯದಲ್ಲಿ ಲಯನ್ಸ್ ತಂಡವು ರೂಟ್ಸ್ ತಂಡವನ್ನು 5-0 ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಲಯನ್ಸ್ ಪರ ನೇಹಲ್ (2), ಚರಣ್, ಜಗತ್, ಲಿಯನ್ ತಲಾ ಒಂದೊಂದು ಗೋಲು ಹೊಡೆದರು.
ಕೊಡಗು ವಿದ್ಯಾಲಯ ತಂಡವು ರೂಟ್ಸ್ ತಂಡ ವಿರುದ್ಧ 4-0 ಗೋಲುಗಳಿಂದ ಜಯ ಸಾಧಿಸಿತು. ವಿದ್ಯಾಲಯ ಪರ ಆರ್ಯನ್ ಸೋಮಣ್ಣ, ಸಿ. ಪಿ. ಲಿನಿನ್, ಕಾವೇರಪ್ಪ ಹಾಗೂ ಆರ್ಯನ್ ದೇವಯ್ಯ ಗೋಲು ಹೊಡೆದರು. ಸಂತ ಅನ್ನಮ್ಮ ತಂಡವು ಕಾಲ್ಸ್ ವಿರುದ್ಧ 2-0 ಗೋಲುಗಳಿಂದ ಜಯ ಪಡೆಯಿತು. ಅನ್ನಮ್ಮ ಪರ ಯಶ್ವಿನ್ ಹಾಗೂ ದಿಶನ್ ತಲಾ ಒಂದೊಂದು ಗೋಲು ಹೊಡೆದರು.
ಪ್ರೌಢ ಬಾಲಕರು : ಕೋದಂಡ ಎ ಪೂವಯ್ಯ ಜ್ಞಾಪಕಾರ್ಥ ಪ್ರೌಢÀ ಬಾಲಕರ ವಿಭಾಗದಲ್ಲಿ ಪೊನ್ನಂಪೇಟೆ ಜೂನಿಯರ್ ಕಾಲೇಜು ತಂಡ ನ್ಯಾಷನಲ್ ಅಕಾಡೆಮಿ ತಂಡವನ್ನು 6-0 ಗೋಲುಗಳಿಂದ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಪೊನ್ನಂಪೇಟೆ ಪರ 9,14 ಹಾಗೂ 17 ನೇ ನಿಮಿಷಗಳಲ್ಲಿ ರಕ್ಷಿತ್ 3 ಗೋಲು ಹೊಡೆದರು. 4 ರಲ್ಲಿ ಆಶಿಕ್, 8 ಮತ್ತು 9 ರಲ್ಲಿ ಧ್ಯಾನ್ 2 ಗೋಲು ಹೊಡೆದರು.
ರೂಟ್ಸ್ ತಂಡವು ಗುಡ್ ಶೆಫರ್ಡ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ರೂಟ್ಸ್ ಪರ 1, 15 ರಲ್ಲಿ ರಕ್ಷಿತ್, ಶೆಫರ್ಡ್ ಪರ 25 ರಲ್ಲಿ ಮಿಥುನ್ ಗೋಲು ಹೊಡೆದರು. 2 ನೇ ಸುತ್ತಿನ ಪಂದ್ಯದಲ್ಲಿ ಪೊನ್ನಂಪೇಟೆ ಜೂನಿಯರ್ ಕಾಲೇಜು ತಂಡವು ಕಾಲ್ಸ್ ವಿರುದ್ದ 4-0 ಗೋಲುಗಳಿಂದ ಜಯ ಸಾಧಿಸಿತು. ಪೊನ್ನಂಪೇಟೆ ಪರ ಧ್ಯಾನ್ 5,14,25 ನಿಮಿಷಗಳಲ್ಲಿ ಗೋಲು ಹೊಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. 31 ನೇ ನಿಮಿಷದಲ್ಲಿ ಮೋನಿಶ್ 1 ಗೋಲು ಹೊಡೆದು ಗೆಲುವಿನ ಅಂತರವನ್ನು ಹೆಚ್ಚಿಸಿದರು.
3 ನೇ ಸುತ್ತಿನ ಪಂದ್ಯದಲ್ಲಿ ಪೊನ್ನಂಪೇಟೆ ಜೂನಿಯರ್ ಕಾಲೇಜು ತಂಡ ಪ್ರತಿಭಾ ತಂಡದ ವಿರುದ್ಧ 6-0 ಗೋಲುಗಳ ಗೆಲುವು ಪಡೆಯಿತು. ಗೌತಂ 4, 5, 10, 18, ನಿಮಿಷಗಳಲ್ಲಿ 4 ಗೋಲು ಬಾರಿಸಿದರು. ಇವರೊಂದಿಗೆ ಯಶ್ವಿನ್ 11 ನೇ ನಿಮಿಷದಲ್ಲಿ, ಧನಿಕ್ 9 ನೇ ನಿಮಿಷದಲ್ಲಿ ಗೋಲು ಹೊಡೆದರು. ಹಾಕಿ ಕೂರ್ಗ್ ವತಿಯಿಂದ ನಡೆಯಲಿರುವ ಮಂಡೇಪಂಡ ಸುಬ್ರಮಣ್ಯ ಜ್ಞಾಪಕಾರ್ಥ ಹೈಯರ್ ಪ್ರೈಮರಿ ಹಾಕಿ ಟೂರ್ನಿಯಲ್ಲಿ 22 ತಂಡಗಳು ಸೆಣೆಸಾಟ ನಡೆಸುತ್ತಿದೆ ಎಂದು ಹಾಕಿ ಕೂರ್ಗ್ ಖಜಾಂಚಿ ಐನಂಡ ಲಾಲಾ ಅಯ್ಯಣ್ಣ ತಿಳಿಸಿದ್ದಾರೆ.
3 ನೇ ವರ್ಷದ ಕಿರಿಯರ ಕ್ರೀಡಾಕೂಟದ ಅಂತಿಮ ಪಂದ್ಯಗಳು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ತಾ. 8 ರಂದು ನಡೆಯಲಿದೆ. ಈ ವಿಭಾಗದಲ್ಲಿ ಬಾಲಕರ 17 ಹಾಗೂ ಬಾಲಕಿಯರ 5 ತಂಡಗಳು ಸೆಣೆಸಾಟ ನಡೆಸಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದರೊಂದಿಗೆ ಕೋದಂಡ ಎ ಪೂವಯ್ಯ ಜ್ಞಾಪಕಾರ್ಥದ ಪ್ರೌಢ ವಿಭಾಗದಲ್ಲಿ 12 ತಂಡಗಳು, ಕಾಲೇಜು ವಿಭಾಗದ ನೆಲ್ಲಮಕ್ಕಡ ಲಾಲಿ ಈಶ್ವರಿ ಜ್ಞಾಪಕಾರ್ಥದ ಟೂರ್ನಿಯಲ್ಲಿ 18 ತಂಡಗಳು ಸ್ಪರ್ಧಿಸಲಿವೆ ಎಂದರು.
ಈಗಾಗಲೇ ಡಿಸೆಂಬರ್ ಕೊನೆಯ ವಾರದಲ್ಲಿ ಮಹಿಳಾ ಹಾಕಿ ಟೂರ್ನಿ ನಡೆಯಲಿದೆ. ನಂತರ ರಾಷ್ಟ್ರಮಟ್ಟಕ್ಕೆ ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ಎಂಬ ಮೂರು ವಿಭಾಗಗಳಿಗೆ ತಂಡಗಳ ಆಯ್ಕೆ ನಡೆಯಲಿದೆ. ರಾಷ್ಟ್ರಮಟ್ಟಕ್ಕೆ ಈ ಮೂರು ವಿಭಾಗಗಳ ತಂಡಗಳನ್ನು ಆಯ್ಕೆ ಮಾಡಲಾಗುವದು ಎಂದರು. ಗೋಷ್ಠಿಯಲ್ಲಿ ಹಾಕಿ ಕೂರ್ಗ್ ತಾಂತ್ರಿಕ ಸಮಿತಿ ಸದಸ್ಯ ನೆಲ್ಲಮಕ್ಕಡ ಪವನ್ ಉಪಸ್ಥಿತರಿದ್ದರು.