ಗೋಣಿಕೊಪ್ಪಲು, ನ. 21: ಜಿಲ್ಲಾ ಕಾಂಗ್ರೆಸ್ ಸಮನ್ವಯ ಸಮಿತಿ ಚುನಾವಣೆ ಸಂದರ್ಭ ಮಾತ್ರ ಅಸ್ತಿತ್ವದಲ್ಲಿದ್ದು ಇದೀಗ ಅಸ್ತಿತ್ವದಲ್ಲಿಲ್ಲ. ಇದೀಗ ಪಕ್ಷದ ಆಂತರಿಕ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿರುವವರು ಪಿ.ಸಿ. ಹಸೈನಾರ್ ಮತ್ತು ಅವರ ಗುಂಪೇ ವಿನಃ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಲ್ಲಿ ಗೊಂದಲವಿಲ್ಲ ಎಂದು ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್‍ರೆಹಮಾನ್ (ಬಾಪು) ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್ ಜಿಲ್ಲೆಯಲ್ಲಿ ಎಲ್ಲ ಅಲ್ಪಸಂಖ್ಯಾತರ ವಿಶ್ವಾಸದೊಂದಿಗೆ ಕಳೆದ ಐದು ವರ್ಷ ಉತ್ತಮವಾಗಿ, ಪಕ್ಷ ಸಿದ್ದವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಈ ಹಿಂದೆ ದಿ. ಇಕ್ಬಾಲ್ ಹಸನ್ ಹಾಗೂ ಪಿ.ಎಂ. ಖಾಸಿಮ್ ಅವರು ಬಿಸಿಎಂ ಎ. ಮೀಸಲಾತಿ ಅನ್ವಯ ಜಿ.ಪಂ. ಉಪಾಧ್ಯಕ್ಷರಾಗಿ ಅಧಿಕಾರ ಹೊಂದಿಕೊಂಡರೇ ವಿನಃ ಸಾಮಾನ್ಯ ವರ್ಗಕ್ಕೆ ಸೀಮಿತವಾಗುತ್ತಿರುವ ಗೌರವಯುತ ಪದವಿ ಸಿಕ್ಕಿಲ್ಲ. ಇದನ್ನು ಪ್ರಶ್ನೆ ಮಾಡಬಾರದೆಂದು ಹಸೈನಾರ್ ಹೇಳುವದು ಔಚಿತ್ಯಪೂರ್ಣವಲ್ಲ.

ಕೇರಳದ ತಲಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂದು ಹೇಳಿಕೊಳ್ಳುವ ಹಸೈನಾರ್ ಅವರು ಜಿಲ್ಲೆಯಲ್ಲಿ ಇದೀಗ ಹಿಂಬಾಗಿಲಿನಿಂದ ಯಾವದೋ ಅಧಿಕಾರಕ್ಕಾಗಿ ಹವಣಿಸುತ್ತಿದ್ದಾರೆ. ಓರ್ವ ವ್ಯಕ್ತಿ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪದಾಧಿಕಾರಿ ಸ್ಥಾನ ಹೊಂದಲು ಸಾಧ್ಯವಿಲ್ಲ.

ಅಲ್ಪಸಂಖ್ಯಾತರ ಬಗ್ಗೆ ಹಸೈನಾರ್ ಅವರಿಗೆ ಕಾಳಜಿ ಇದ್ದಲ್ಲಿ ಐಗೂರು ಘಟನೆಗೆ ಸಂಬಂಧಿಸಿದಂತೆ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ಸಾಂತ್ವನ ಹೇಳಲು ಅವಕಾಶವಿತ್ತು. ಆದರೆ ಜಿಲ್ಲಾಧ್ಯಕ್ಷ ಯಾಕೂಬ್ ಅವರು ತುರ್ತು ಸ್ಪಂದಿಸಿ ಐಗೂರುವಿಗೆ ತೆರಳಿ ಸ್ಪಂದಿಸಿದ್ದಾರೆ, ಹಲವು ಅಲ್ಪಸಂಖ್ಯಾತರ ಸಮಸ್ಯೆಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾಕೂಬ್ ಯಾವದೇ ಪ್ರಚಾರ ಬಯಸದೆ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಿದ್ದೂ ಸಿದ್ದಾಪುರದ ಎಂ.ಹೆಚ್. ಮೂಸಾ ಎಂಬವರು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದುರುದ್ದೇಶಪೂರಿತ ಹೇಳಿಕೆಯನ್ನು ಖಂಡಿಸುವದಾಗಿ ಬಾಪು ಪ್ರತಿಕ್ರಿಯಿಸಿದ್ದಾರೆ.

ಸಿದ್ಧಾಪುರಕ್ಕೆ ಸೀಮಿತವಾಗಿ ಚುನಾವಣೆ ಸಂದರ್ಭ ಮಾತ್ರ ಪ್ರತ್ಯಕ್ಷವಾಗುವ ಕೆಲವರಿಂದಾಗಿ ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಸಿದ್ಧಾಪುರದಲ್ಲಿ ನಿಷ್ಟಾವಂತ ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದ್ದು, ಗೊಂದಲದ ಹೇಳಿಕೆಯನ್ನು ಪಿ.ಸಿ.ಹಸೈನಾರ್ ಹಾಗೂ ಬಳಗ ಕೈಬಿಡಲಿ ಎಂದು ಬಾಪು ಆಗ್ರಹಿಸಿದ್ದಾರೆ.