ಕುಶಾಲನಗರ, ಜು. 13: ಜಾಗತಿಕ ತಾಪಮಾನ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹಸಿರೀಕರಣಕ್ಕೆ ಪ್ರಾಮುಖ್ಯತೆ ನೀಡಬೇಕಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು.
ಕಾವೇರಿ ಪರಿಸರ ರಕ್ಷಣಾ ಬಳಗ, ಭಾರತೀಯ ಜನತಾ ಪಕ್ಷ ನಗರ ಘಟಕ ಮತ್ತು ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ‘ಹುಟ್ಟು ಹಬ್ಬಕ್ಕೊಂದು ಗಿಡ’ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಉಳಿಸಿ ಬೆಳೆಸಿದಲ್ಲಿ ಮಾತ್ರ ಮುಂದಿನ ಪೀಳಿಗೆ ಸಮೃದ್ಧಿಯಿಂದ ಬದುಕಲು ಸಾಧ್ಯ. ಜಿಲ್ಲೆಯಲ್ಲಿ ಲಕ್ಷವೃಕ್ಷ ಕಾರ್ಯಕ್ರಮದಡಿ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರೂ ಕೂಡ ಹುಟ್ಟು ಹಬ್ಬಕ್ಕೊಂದು ಗಿಡವನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಕಾಳಜಿಯೊಂದಿಗೆ ಆರೋಗ್ಯವಂತ ಜೀವನದ ಬಗ್ಗೆ ಚಿಂತನೆ ಹರಿಸುವಂತೆ ಅವರು ಕರೆ ನೀಡಿದರು.
ಕಾವೇರಿ ಪರಿಸರ ರಕ್ಷಣಾ ಬಳಗದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು. ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಬಳಗದ ವತಿಯಿಂದ ಗಿಡವೊಂದನ್ನು ಉಡುಗೊರೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ಕುಶಾಲನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಜಿ. ಮನು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಂ.ಎನ್. ಕೊಮಾರಪ್ಪ, ಯುವ ಮೋರ್ಚಾ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಪ್ರಮುಖರಾದ ವಿ.ಎನ್. ವಸಂತ ಕುಮಾರ್, ಎಸ್.ಎನ್. ರಾಜಾರಾವ್, ವಿ.ಡಿ. ಪುಂಡರೀಕಾಕ್ಷ, ಹೆಚ್.ಎನ್. ರಾಮಚಂದ್ರ, ಭಾಸ್ಕರ್ ನಾಯಕ್, ಎಂ.ವಿ. ನಾರಾಯಣ, ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ವೆಂಕಟೇಶ್, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಹೆಚ್.ವಿ. ಶಿವಪ್ಪ, ಕಾವೇರಿ ಪರಿಸರ ರಕ್ಷಣಾ ಬಳಗದ ಪ್ರಮುಖರಾದ, ವಿ.ಆರ್. ಶಿವಶಂಕರ್, ಡಿ.ಆರ್. ಸೋಮಶೇಖರ್, ನಿಡ್ಯಮಲೆ ದಿನೇಶ್, ವೈಶಾಖ್, ಪ್ರವೀಣ್, ಸಿ.ಜೆ. ಚನ್ನಯ್ಯ ಹಾಗೂ ಕಾಲೇಜು ವಿದ್ಯಾರ್ಥಿ ಪ್ರಮುಖರಾದ ದರ್ಶನ್, ರಕ್ಷಿತ್ ಇದ್ದರು.