*ಗೋಣಿಕೊಪ್ಪಲು, ಜು. 21: 5 ವರ್ಷಗಳಿಗೊಮ್ಮೆ ನಡೆಯುವ ಹಳ್ಳಿಗಟ್ಟು ಗ್ರಾಮದ ಅಚ್ಚಿಯಂಡ ಕುಟುಂಬದ ನರಿಪೂದ ಹಬ್ಬ ನಡೆಯಿತು. ಅಮ್ಮಕೊಡವ ಜನಾಂಗದ ಅಚ್ಚಿಯಂಡ ಕುಟುಂಬ ನಡೆಸುವ ಈ ಹಬ್ಬ 2 ದಿನಗಳ ಕಾಲ ನಡೆದು ಗ್ರಾಮಸ್ಥರ ಮನ ತಣಿಸಿದೆ. ಇತಿಹಾಸ ಹೊಂದಿರುವ ನರಿಪೂದ ಹಬ್ಬ ತಮ್ಮ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯದಂತೆ 5 ವರ್ಷಗಳಿಗೊಮ್ಮೆ ನಡೆಯುತ್ತದೆ. ಪಣಿಕ ಜನಾಂಗದ ವ್ಯಕ್ತಿ ಹುಲಿಯ ವೇಷ ಧರಿಸಿ ಹುಲಿಯಂತೆ ವರ್ತಿಸುತ್ತಾ ಜನರನ್ನು ಹೆದರಿಸುವದು ಈ ಹಬ್ಬದ ಪ್ರತೀತಿಗಳಲ್ಲಿ ಒಂದು. ಹುಲಿ ನೆಗೆಯುವದು, ಘರ್ಜಿಸುವಂತೆ ವೇಷಧಾರಿ ವರ್ತಿಸುತ್ತಾನೆ. ಸಿಟ್ಟಿನಿಂದ ಅಬ್ಬರಿಸುತ್ತಾ ಓಡುವ ಹುಲಿ ವೇಷಧಾರಿಯ ಸೊಂಟಕ್ಕೆ ಹಗ್ಗದಿಂದ ಬಿಗಿದು ಹಿಡಿದುಕೊಳ್ಳಲಾಗುತ್ತದೆ. ಕೆಸರು ಗದ್ದೆಯಲ್ಲಿ ಬಿದ್ದು ಒದ್ದಾಡಿ ಸಂಭ್ರಮಿಸುವ ಕ್ಷಣ ಕಣ್ತುಂಬಿಸಿಕೊಳ್ಳಬಹುದು.