(ನಿನ್ನೆಯ ಸಂಚಿಕೆಯಿಂದ) ‘ಬ್ರಹ್ಮ ಜಿನೇಂದ್ರಗೇಹಮೆನುತಂ ಬಂದತ್ರ್ತಿಯಿಂ ಸೇಸೆಗೊಂಡು ಬಲಂಗೊಣ್ಣು ಸಮನ್ತು ಪೋದನೆಸವೀ ಗ್ರಾಮಾಧಿಪಂ ಸಂದ ಬಾದುಬೆ ದೀಪಾವಳಿ ಕಾರಪುಣ್ಣಮೆ ಯೆನಿಪ್ಪೀ ಮೂಛಿು ಪರ್ವಗಳೊಳ್’ ಬೊಂಬೆಗಳ ಹಬ್ಬ (ದಸರೆ) ದೀಪಾವಳಿ, ಕಾರಹುಣ್ಣಿಮೆಯಲ್ಲಿ ಬ್ರಹ್ಮಜಿನಾಲಯಕ್ಕೆ ಬಂದು ಅಕ್ಷತೆ (ಸೇಸೆ) ಪ್ರದಕ್ಷಿಣೆ ಮಾಡಿ ಹೋಗುವ ಜಾನಪದ ಪದ್ಧತಿಯ ವರ್ಣನೆ ಇಲ್ಲಿ ಕಾಣುತ್ತದೆ.
ಕ್ರಿ.ಶ. 1017ರ ಚೋಳರ ಕಾಲ ಬೆಳತೂರಿನ ದೇಕಬ್ಬೆ ಶಾಸನದಲ್ಲಿ ಜನಪದ ಭಾಷೆಯ ಸೊಗಡು ಪುಷ್ಟಿಯುತವಾಗಿದೆ. ಹಾಗೂ ಶಿಲ್ಪದಲ್ಲಿ ಜಾನಪದ ಸತಿ ಆಚರಣೆಯ ವಿವರಗಳಿರುವದೂ ಶಾಸನ ತಜ್ಞರ ಈಚಿನ ಶೋಧದಲ್ಲಿ ಕಂಡು ಬಂದಿದೆ. ಹೀಗೆಯೇ ಮುಂದಿನ ಕೆಲವಾರು ಶಾಸನಗಳಲ್ಲಿಯೂ ಜಾನಪದ ಸಂಗತಿಗಳು ಕಂಡು ಬಂದು ‘ಐತಿಹಾಸ-ಜಾನಪದ’ ಹೊಂದಿಕೆಯ ಶ್ರೇಣಿಯು ಕಂಡು ಬರುತ್ತದೆ.
ಹೀಗೆ ಶಾಸನ ಭಾಷೆ, ವಸ್ತು, ಶಿಲ್ಪಗಳ ಮೂಲಕವು ಜಾನಪದ ವಿಷಯ ವಿಶೇಷಗಳನ್ನು ಕಾಣಬಹುದು. ಇತಿಹಾಸ ಹಾಗೂ ಜಾನಪದೀಯ ಸಂಬಂಧಗಳನ್ನು ಪರಿಶೀಲಿಸಬಹುದು. ಹೇಳಿಕೇಳಿ 12ನೇ ಶತಮಾನದ ವಚನಕಾರರು ಆಡುನುಡಿಗಳನ್ನು ಬಳಸಿ ಜಾನಪದದ ಶಬ್ದಕಣಜವನ್ನೇ ಸೃಷ್ಟಿಸಿಕೊಟ್ಟರು. ಶಿವಪಾರಮ್ಮ ಪ್ರಸಾರವೂ ಅವರ ಗುರಿಯಲ್ಲಿತ್ತು. ಆತ್ಮಾವಲೋಕನದಲ್ಲಿ ವಿವೇಚನೆಯ ಸಂವಾದದಲ್ಲಿ, ಕನ್ನಡತನದ ದೇಸೀ ಅಭಿವ್ಯಕ್ತಿ ಅನುಭವಗಳ ಹಂದರದಲ್ಲಿ ‘ಸೋಹಂ’ ಬದಲು ದಾಸೋಹಂ ನಿಷ್ಠೆ ಎದ್ದು ನಲಿಯಿತೆನ್ನಬೇಕು. ಮುಂದೆ ಹರಿದಾಸರು ಹರಿಪಾರಮ್ಯವನ್ನು ಎತ್ತಿ ಹಿಡಿಯುವಲ್ಲಿ ನೀತಿ ಪ್ರಚಾರ, ಹಾಡುಗಳ, ಕೀರ್ತನೆಗಳ ಗೇಯತೆಯ ಹಂದರದಲ್ಲಿ, ಸರಳ ನುಡಿಗಳಲ್ಲಿ, ಜಾನಪದದ ಸೊಗಡಿನಲ್ಲಿ, ಕನ್ನಡದ ಶಕ್ತಿಯನ್ನು ದೇಸೀ ಹಂಬಲದಲ್ಲಿ ಮಂಡಿಸಿದರು. ಕನಕದಾಸರು ತಾವು ಹುಟ್ಟಿ ಬಂದ ಸಮಾಜದ ಕಷ್ಟನಿಷ್ಠುರಗಳ ಅನುಭವದಲ್ಲಿ ವರ್ಗ ಶ್ರೇಷ್ಠತೆಯ ಅನುಸರಣೆಯವರ ಎದುರಲ್ಲಿಯೆ ಸೈ ಎನಿಸಿಕೊಂಡ ಜಾನಪದ ವ್ಯಕ್ತಿತ್ವ ಹೊಂದಿದ್ದರು. ಸ್ವಾತಂತ್ರ್ಯ ನಿಕಟಪೂರ್ವದಲ್ಲಿಯೂ ಅಜ್ಞಾತ ಪ್ರಸಿದ್ಧರಾಗಿದ್ದ ಶ್ರೀಮತಿ ಅಂಬಾಬಾಯಿಯವರು, ಕಟ್ಟಾ ಸಂಪ್ರದಾಯದ ವರ್ಗದಿಂದ ಬಂದವರಾಗಿದ್ದರೂ ವಿಧವೆಯಾದ ಮೇಲೆ ಶ್ರೀಕೃಷ್ಣನೇ ತನ್ನ ದೈವಿಕ ಪತಿ ಎಂದು ಆರಾಧಿಸುತ್ತ (ಅಕ್ಕ ಮಹಾದೇವಿಯ ನೆನಪು ತರುತ್ತ) ಮುತ್ತೈದೆತನವನ್ನು ಪರಿಭಾವಿಸಿಕೊಂಡ ಕ್ರಾಂತಿಕಾರಿ ಮಹಿಳೆಯಾಗಿ ಜಾನಪದ ಸೊಗಡನ್ನು ತೋರಿದರೆನ್ನಬೇಕು, ತಮ್ಮ ಹಾಡುಗಳು ಕೀರ್ತನೆಗಳ ಮೂಲಕ ಕನ್ನಡದ ಜಾನಪದ ಜಾಯಮಾನವನ್ನು ತಮ್ಮ ಶಕ್ತ್ಯಾನುಸಾರ ತುಂಬಿಕೊಟ್ಟರೆನ್ನಬಹುದು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬೌದ್ಧಿಕ ಸಂಕೀರ್ಣತೆಗಳು, ಭಾಷೆಯ ಪಲ್ಲಟ, ಬಳಕೆಯ ಮೌಲ್ಯಗಳಿಗೆ ಕುಸಿದ ಪ್ರಾಧಾನ್ಯತೆ ವೈಜ್ಞಾನಿಕ ನೆಲೆಗಳ ಅತಿ ಅವಲಂಬನೆ, ಪಾಶ್ಚಾತ್ಯ ಸಾಹಿತ್ಯದ ಅತಿ ಅನುಕರಣೆ ಮುಂತಾದವುಗಳಿಂದ ಹಾಗೂ ನವೀನ ಸಾಹಿತ್ಯ ಪ್ರಯೋಗಗಳ ಪರಿಣಾಮಗಳಿದ್ದರೂ ಅಸಮರ್ಪಕ ವಿವೇಚನೆ ಇತ್ಯಾದಿಗಳಿಂದ ಜಾನಪದ ನೆಲೆಯು ಕೆಲಮಟ್ಟಿಗೆ ನಿರ್ಲಕ್ಷಿತಗೊಂಡಿತೆನ್ನಬೇಕು. ಆದರೆ, ಜಾನಪದ ಜಾಗೃತ ಮನಸ್ಸುಗಳು ಈ ದಿಸೆಯಲ್ಲಿ ಸುಮ್ಮನೆ ಕೂರಲಿಲ್ಲ. ಈ ನಿಟ್ಟಿನಲ್ಲಿ ನವೋದಯ ಬರಹಗಾರರಿಂದ ಹಿಡಿದು ಇಂದಿನವರೆಗೆ ಅನೇಕ ಜಾನಪದ ಮನಸ್ಸುಗಳು, ಜಾನಪದ ಜಾಯಮಾನಕ್ಕೆ ಹೊಸ ಆಯಾಮಗಳನ್ನು ತಂದುಕೊಟ್ಟಿವೆ. ಜೀವನಾನುಭವಗಳನ್ನು ಪ್ರತಿಭೆಯ ನೆಲೆಗಳನ್ನು ಸಮಗ್ರವಾಗಿ ಬಹುಮುಖಿಯಾಗಿ ಬಳಸಿಕೊಂಡ ಪ್ರಯತ್ನಶೀಲತೆಯೂ ಇಲ್ಲಿ ಕಂಡು ಬರುತ್ತದೆ.
(ಮುಂದುವರಿಯುವದು)
-ಎಂ. ಜಿ. ನಾಗರಾಜ್