ಮಡಿಕೇರಿ, ಡಿ. 5: ಕೊಡಗಿನಲ್ಲಿ ಹಣ ಪರಿವರ್ತನೆ ನಡೆಯುತ್ತಿರುವದನ್ನು ಖಂಡಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಣದ ದಂಧೆ ನಡೆಸುತ್ತಿರುವ ದಂಧೆ ಕೋರರಿಗೆ ಸಹಾಯ ಮಾಡುತ್ತಿರುವ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಪ್ಪು ಹಣವನ್ನು ನಿಗ್ರಹಿಸುವ ಸಲುವಾಗಿ ಜಾರಿಗೆ ತಂದಿರುವ ನೋಟು ನಿಷೇಧ ಯೋಜನೆಯನ್ನು ಕೆಲವರು ಬ್ಯಾಂಕ್ ಅಧಿಕಾರಿಗಳ ಸಹಾಯ ಪಡೆದು ಕಮಿಷನ್ ಆಮಿಷವೊಡ್ಡಿ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವ ದೇಶದ್ರೋಹದ ಕೆಲಸವನ್ನು ಮಾಡುತ್ತಿದ್ದಾರೆ. ಒಂದೆಡೆ ಎಲ್ಲೆಂದರಲ್ಲಿ ಪತ್ತೆಯಾಗುತ್ತಿರುವ ಲೆಕ್ಕಕ್ಕೆ ಸಿಗದ ಹೊಸನೋಟುಗಳು, ಇನ್ನೊಂದೆಡೆ ಕೇವಲ ಎರಡು ಸಾವಿರಕ್ಕಾಗಿ ಪರದಾಡುತ್ತಿರುವ ಬಡಪಾಯಿ ಸಾರ್ವಜನಿಕರು. ಈ ಯೋಜನೆಯ ಮೂಲ ಉದ್ದೇಶವೇ ಬುಡಮೇಲಾಗಿದ್ದು, ಕೊಡಗಿನ ಕಾಫಿ ಬೆಳೆಗಾರರು ತಮ್ಮ ತೋಟದ ಕಾರ್ಮಿಕರಿಗೆ ಸೂಕ್ತ ಸಮಯದಲ್ಲಿ ಸಂಬಳ ಕೊಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಗ ಕಾಫಿ ಕೊಯ್ಲು ಸಮಯವಾಗಿರುವದರಿಂದ ಸಣ್ಣ ಕಾಫಿ ಬೆಳೆಗಾರರಿಗೂ ವಾರಕ್ಕೆ ಕನಿಷ್ಟ ಪಕ್ಷ ಒಂದು ಲಕ್ಷದ ಅವಶ್ಯಕತೆಯಿದೆ. ಕಾರ್ಮಿಕರಿಗೆ ಹಣ ನೀಡದೆ ಚೆಕ್ಕು ನೀಡಿದಲ್ಲಿ ದೂರದ ಊರುಗಳಿಂದ ಕೆಲಸಕ್ಕೆ ಬರಲು ನಿರಾಕರಿಸುತ್ತಾರೆ. ತುಂಬ ದಿನ ಕಾದರೆ ಕಾಫಿ ಹಣ್ಣುಗಳು ಬಿಸಿಲಿನ ತಾಪಕ್ಕೆ ಒಣಗಿ ಹೋಗಲಿದ್ದು, ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡದಿದ್ದಲ್ಲಿ ಕಾಫಿ ಬೆಳೆಗಾರರಿಗೆ ನಷ್ಟವಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹಣ ಪರಿವರ್ತನೆ ದಂಧೆಯಲ್ಲಿರುವ ಎಲ್ಲರನ್ನು ಪತ್ತೆಹಚ್ಚಿ ಶಿಕ್ಷಿಸಬೇಕು. ಬ್ಯಾಂಕ್ ಸಿಬ್ಬಂದಿಗಳ ಶಾಮಿಲು ದೃಢಪಟ್ಟಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈಗಾಗಲೇ ಕೊಡಗಿನಲ್ಲಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಹೊಸ ನೋಟುಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಇಲಾಖೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.