ಸೋಮವಾರಪೇಟೆ,ಜ.30: ನೋಟ್ ಬ್ಯಾನ್ ನಂತರ ಮೂರು ವಾರದಲ್ಲಿ ತಾಲೂಕಿನ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಾರ್ಟ್‍ನಲ್ಲಿ ಸಿಕ್ಕಿದ 35 ಲಕ್ಷ ರೂಪಾಯಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ವಿದ್ಯಮಾನದ ಮುಂದುವರೆದ ಭಾಗವಾಗಿ ಕಾಂಗ್ರೆಸ್ ಕಳೆದ ವಾರ ನಡೆಸಿದ ಹೋರಾಟಕ್ಕೆ ಇಂದು ಬಿಜೆಪಿ ಪ್ರತಿಯಾಗಿ ಪ್ರತಿಭಟನೆ ನಡೆಸಿತು.

ಇಲ್ಲಿನ ವಿವೇಕಾನಂದ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಭ್ರಷ್ಟಾಚಾರದ ಪೋಷಕರಾಗಿ ಕಾಂಗ್ರೆಸ್ ನಾಯಕರು ಹೋರಾಟ ನಡೆಸಿದ್ದಾರೆ ಎಂದು ಟೀಕಿಸಿದರು.

ಮೆರವಣಿಗೆಯ ನಂತರ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ಯುದ್ಧ ಸಾರಿದ್ದರೆ, ಭ್ರಷ್ಟಾಚಾರವನ್ನು ಜೀವಂತವಾಗಿಡಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೋಟ್ ಬ್ಯಾನ್ ನಂತರ ವಾರಕ್ಕೆ 24 ಸಾವಿರ, ದಿನಕ್ಕೆ 4 ಸಾವಿರದ ಡ್ರಾ ಮಿತಿ ನಿಗದಿಯಾಗಿದ್ದರೂ ಕಾಂಗ್ರೆಸ್‍ನ ತಾ.ಪಂ. ಸದಸ್ಯನಿಗೆ 35 ಲಕ್ಷ ಹೊಸನೋಟು ಎಲ್ಲಿಂದ ಬಂತು? ಈ ಬಗ್ಗೆ ತನಿಖೆ ನಡೆಯಬೇಕಿದ್ದರೂ ಆ ಸದಸ್ಯನ ಪರವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಹೋರಾಟ ನಡೆಸಿದ್ದು ನಾಚಿಕೆಗೇಡು ಎಂದರು.

ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ತಾ.ಪಂ. ಸದಸ್ಯ ಅನಂತ್‍ಕುಮಾರ್ ಅವರು ಚುನಾವಣಾ ಆಯೋಗಕ್ಕೆ ತಮ್ಮ ಕುಟುಂಬದ ವಾರ್ಷಿಕ ಆದಾಯ 3.50 ಲಕ್ಷ ಎಂದು ತೋರಿಸಿದ್ದು, 12 ಎಕರೆ ಕಾಫಿ ತೋಟ, 1.50 ಎಕರೆ ಗದ್ದೆ ಇರುವದಾಗಿ ಹೇಳಿಕೊಂಡಿದ್ದಾರೆ. ವಾರ್ಷಿಕ ಆದಾಯ 3.50 ಲಕ್ಷ ಇದ್ದರೆ ನೋಟ್ ಬ್ಯಾನ್ ಆದ ಮೂರು ವಾರದಲ್ಲೇ 35ಲಕ್ಷ ಹೊಸನೋಟುಗಳು ಹೇಗೆ ಬಂದವು? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದ ವಿರುದ್ಧವಾಗಿ ಬಿಜೆಪಿ ಹೋರಾಟ ಮುಂದು ವರೆಯಲಿದೆ. ಮುಂದಿನ ಸಭೆಗಳಲ್ಲೂ ಈ ಬಗ್ಗೆ ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್‍ನವರು 100 ಜನರನ್ನು ಕರೆತಂದು ನಮ್ಮ ಪ್ರತಿಭಟನೆಗೆ ತಡೆಯೊಡ್ಡಲು ಪ್ರಯತ್ನಿಸಿದರೆ ನಮಗೆ 1000 ಜನರನ್ನು ಕರೆತರಲು ಗೊತ್ತಿದೆ ಎಂದು ಸವಾಲು ಹಾಕಿದರು.

ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ನಾಯಕರು ತನ್ನನ್ನು ರೌಡಿಶೀಟರ್ ಎಂದು ಟೀಕಿಸಿದ್ದು, ಚೆಟ್ಟಳ್ಳಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರಿಂದಲೇ ಕಾಂಗ್ರೆಸ್ ಮುಖಂಡರು ಪೊಲೀಸ್ ಇಲಾಖೆ ಮೇಲೆ ಒತ್ತಡ ತಂದು ತನ್ನ ಮೇಲೆ ರೌಡಿಶೀಟ್ ಹಾಕಿಸಿದ್ದಾರೆ. ನಾನು ಒಂದು ದಿನವೂ ಜೈಲಿಗೆ ಹೋಗಿಲ್ಲ. ಒಂದೇ ಒಂದು ಕೇಸ್ ಸಹ ಇಲ್ಲ. ಆದರೂ ನ್ಯಾಯಪರ ಹೋರಾಟದ ವಿಚಾರದಲ್ಲಿ ರೌಡಿ ಶೀಟರ್ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಕಾಂಗ್ರೆಸ್ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದರು.

ತಾ.ಪಂ. ಸದಸ್ಯೆ ತಂಗಮ್ಮ ಮಾತನಾಡಿ, ಬಿಜೆಪಿಯ ಮಹಿಳಾ ಸದಸ್ಯರ ಬಗ್ಗೆ ಮಾತನಾಡಿರುವ ಕಾಂಗ್ರೆಸ್‍ನ ಜಿ.ಪಂ. ಸದಸ್ಯೆ ತನ್ನ ಹಿನ್ನೆಲೆ ಏನು ಎಂಬದನ್ನು ಒಮ್ಮೆ ಅವಲೋಕಿಸಿಕೊಳ್ಳಲಿ ಎಂದು ಜಿ.ಪಂ. ಸದಸ್ಯೆ ಚಂದ್ರಕಲಾ ಅವರ ಹೇಳಿಕೆಗೆ ತಿರುಗೇಟು ಕೊಟ್ಟರು.

ರಾಜ್ಯದಲ್ಲಿ ರೈತರು, ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಾಗ ಪ್ರತಿಭಟಿಸದ ಕಾಂಗ್ರೆಸ್, ಭ್ರಷ್ಟಾಚಾರದ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದೆ. ಭ್ರಷ್ಟಾಚಾರದ ಹಣದಲ್ಲಿ ಪಾಲು ಪಡೆದಿರುವವರು ಹೋರಾಟ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಟೀಕಿಸಿದರು.

ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಭ್ರಷ್ಟಾಚಾರದ ಪರ ಹೋರಾಡಿದ ಕಾಂಗ್ರೆಸ್ ಸಂಸ್ಕøತಿ ಸಮಾಜಕ್ಕೆ ಅರಿವಾಗಿದೆ ಎಂದರು. ಜಿ.ಪಂ. ಮಾಜೀ ಸದಸ್ಯ ರಾಜಾರಾವ್, ಪಕ್ಷದ ಪ್ರಮುಖ ಪ್ರೇಮನಾಥ್ ಅವರುಗಳು ಮಾತನಾಡಿದರು.

ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ತಾಲೂಕು ಅಧ್ಯಕ್ಷ ಕೊಮಾರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಶುಂಠಿ ಸುರೇಶ್, ಮಹೇಶ್ ತಿಮ್ಮಯ್ಯ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಜಿ.ಪಂ., ತಾ.ಪಂ. ಸದಸ್ಯರುಗಳು, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸದಸ್ಯರುಗಳು ಹಾಗೂ ಪಕ್ಷದ ವಿವಿಧ ಮೋರ್ಚಾಗಳ ಪ್ರಮುಖರು ಉಪಸ್ಥಿತರಿದ್ದರು.