ಕುಶಾಲನಗರ, ಜ. 2: ಹಕ್ಕುಗಳ ಚಲಾವಣೆ ಸಂದರ್ಭ ಇತರರ ಹಕ್ಕಿಗೆ ಚ್ಯುತಿಯಾಗದಂತೆ ಎಚ್ಚರವಹಿಸಿ ಪ್ರತಿಯೊಬ್ಬರೂ ಗೌರವ ನೀಡುವಂತಾಗಬೇಕು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಹೇಳಿದರು.ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ನಿವೃತ್ತ ನೌಕರರ ಸಂಘ, ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬರೂ ಕಾನೂನಿನ ಕನಿಷ್ಟ ಅರಿವು ಹೊಂದಿರಬೇಕು. ಮಹಿಳೆ ಯರನ್ನು ಗೌರವಿಸುವದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು. ತಪ್ಪಿದಲ್ಲಿ ಅಸಮತೋಲನದ ಅಪಾಯ ಎದುರಿಸಬೇಕಾಗುತ್ತದೆ. ಶಿಕ್ಷಣ ನೀಡುವದು ಪೋಷಕರ ಕರ್ತವ್ಯ ವಾಗಿದೆ ಎಂದರು. ಪ್ರಾಧಿಕಾರದ ಮೂಲಕ ಕಾನೂನು ಸಲಹೆ ನೆರವು ನೀಡಲಾಗುವದು ಎಂದು ತಿಳಿಸಿದರು.

ಜನತಾ ನ್ಯಾಯಾಲಯದ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವದು. ಹಕ್ಕುಗಳ ಚಲಾವಣೆ ಮಾತ್ರವಲ್ಲದೆ ಮೂಲಭೂತ ಹಕ್ಕುಗಳು, ಕಾನೂನುಬದ್ಧ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ಅರಿಯ ಬೇಕಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಳಾದ ಮೋಹನ್‍ಪ್ರಭು ಅವರು ಮಾತನಾಡಿ, ಹುಟ್ಟು ಸಾವಿನ ನಡುವೆ ಪ್ರತಿಯೊಬ್ಬರೂ ಕಾನೂನುಬದ್ಧವಾಗಿ ಕೆಲಸ ನಿರ್ವಹಿಸಬೇಕಾಗಿದೆ. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಅರಿವು ಹೊಂದಬೇಕಾಗಿದೆ. ಅಸ್ಪøಶ್ಯತೆ ನಿವಾರಣೆ ಬಗ್ಗೆ ಕಾನೂನಿನಲ್ಲಿರುವ ಅಂಶಗಳ ಬಗ್ಗೆ ಅವರು ವಿವರ ಒದಗಿಸಿದರು.

ಉಪನ್ಯಾಸಕರಾಗಿ ಮಾತನಾಡಿದ ಅಂಬೇಡ್ಕರ್ ವಿಚಾರವಾದಿ ನಾಗ ಸಿದ್ದಾರ್ಥ ಹೊಲೆಯಾರ್, ಕೋರೇಗಾಂವ್ ಯುದ್ಧದ ಬಗ್ಗೆ ಮಾಹಿತಿ ಒದಗಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಸ್ಪತ್ರೆ ಉಪಮುಖ್ಯ ವೈದ್ಯಾಧಿಕಾರಿ ಡಾ.ಹೆಚ್.ವಿ.ದೇವದಾಸ್ ಮತ್ತಿತರರು ಪಾಲ್ಗೊಂಡಿದ್ದರು.