ಸೋಮವಾರಪೇಟೆ, ಸೆ. 18: ತಾಲೂಕಿನಲ್ಲಿ ಸಿ ಮತ್ತು ಡಿ ಭೂಮಿ ಹೊಂದಿರುವ ರೈತರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಬೆಳೆಗಾರರ ಸಂಘದ ವತಿಯಿಂದ ರಾಜ್ಯ ಕಂದಾಯ ಇಲಾಖಾ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸೂಕ್ತ ಸ್ಪಂದನ ದೊರಕಿದೆ ಎಂದು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ತಿಳಿಸಿದ್ದಾರೆ.
ಜಿಲ್ಲೆಗೆ ಆಗಮಿಸಿದ್ದ ಸಚಿವರನ್ನು ಮಡಿಕೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸಚಿವರು ತಮ್ಮ ಸಮಸ್ಯೆಯನ್ನು ಆಲಿಸಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಿ ಮತ್ತು ಡಿ ಭೂಮಿಗೆ ಹಕ್ಕುಪತ್ರ ಸಿಕ್ಕಿದರೆ ತಾಲೂಕಿನ ರೈತಾಪಿ ವರ್ಗ ಸಂಕಷ್ಟದಿಂದ ಪಾರಾಗಲಿದ್ದಾರೆ. ರೈತರ ಒತ್ತುವರಿ ಭೂಮಿಯನ್ನು ತೆರವುಗೊಳಿಸುವದಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ಕಂದಾಯ ಸಚಿವರು ಹಕ್ಕುಪತ್ರ ನೀಡುವ ಭರವಸೆ ನೀಡಿರುವದರಿಂದ, ಕಂದಾಯ ಇಲಾಖೆ ಒತ್ತುವರಿ ತೆರವಿಗೆ ಮುಂದಾಗಬಾರದು ಎಂದು ಆಗ್ರಹಿಸಿದರು.
ಕಂದಾಯ ಇಲಾಖೆಯು ಬೇಜವಾಬ್ದಾರಿಯಿಂದ ಜಿಲ್ಲೆಯ ಕೆಲವು ಹೋಬಳಿಗಳಲ್ಲಿ ವ್ಯವಸಾಯಕ್ಕೆ ಯೋಗ್ಯವಾದ ಪೈಸಾರಿ ಜಾಗ ಹಾಗೂ ಕೃಷಿ ಭೂಮಿಯನ್ನು ಸಿ ಮತ್ತು ಡಿ (ವ್ಯವಸಾಯಕ್ಕೆ ಯೋಗ್ಯವಲ್ಲದ ಬರಡು ಭೂಮಿ)ಯಾಗಿ ಪರಿವರ್ತನೆ ಮಾಡಿ ಅರಣ್ಯ ಇಲಾಖೆಗೆ ವರ್ಗ ಮಾಡಿರುವದರಿಂದ ರೈತಾಪಿ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಗೋಷ್ಠಿಯಲ್ಲಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಹೇಳಿದರು.
5 ಏಕರೆ ಒಳಗಿನ ಒತ್ತುವರಿ ಕೃಷಿ ಭೂಮಿಯಲ್ಲಿ ಹಕ್ಕುಪತ್ರಕ್ಕೆ ಈಗಾಗಲೇ ಕಾಫಿ ಬೆಳೆಗಾರರು ಮತ್ತು ಕೃಷಿಕರು ಫಾರಂ ನಂ. 50 ಮತ್ತು 53 ರಡಿ ಅರ್ಜಿ ಸಲ್ಲಿಸಿದ್ದಾರೆ. ಮಾಹಿತಿ ಕೊರತೆಯಿಂದ ಶೇ. 40 ರಷ್ಟು ರೈತರು ಅರ್ಜಿ ಸಲ್ಲಿಸಿಲ್ಲ. ಈ ಕಾರಣದಿಂದ ಅರ್ಜಿ ಸಲ್ಲಿಸಲು 6 ತಿಂಗಳ ಕಾಲಾವಕಾಶವನ್ನು ನೀಡಬೇಕೆಂದು ಕಂದಾಯ ಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಅವರು ಒಪ್ಪಿಗೆ ನೀಡಿದ್ದಾರೆ ಎಂದು ಗೋಷ್ಠಿಯಲ್ಲಿದ್ದ ಸಂಘದ ಉಪಾಧ್ಯಕ್ಷ ಕೆ.ಪಿ. ಬಸಪ್ಪ ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಎಂ. ಲವ, ಸಂಘದ ಮಾಜಿ ಅಧ್ಯಕ್ಷ ಬಿ.ಎಂ. ಸುರೇಶ್ ಮತ್ತಿತರರು ಇದ್ದರು.