ಸೋಮವಾರಪೇಟೆ, ಆ. 17: ನಮ್ಮ ಹಕ್ಕುಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ ಧೈರ್ಯ ಇರಬೇಕು. ಇಲ್ಲದಿದ್ದರೆ ಇಡೀ ಸಮಾಜವೂ ನೀತಿ ನಿಷ್ಠೆಗಳಿಲ್ಲದೆ ಕೆಲವೇ ಜನರ ದಬ್ಬಾಳಿಕೆಗೆ, ಶೋಷಣೆಗೆ ತುತ್ತಾಗುತ್ತದೆ ಎಂದು ಹಿರಿಯ ರಸಾಯನ ವಿಜ್ಞಾನಿ ಹಾಗೂ ಮೈಸೂರು ಗ್ರಾಹಕರ ಪರಿಷತ್‍ನ ಸಂಚಾಲಕರಾದ ಸಿ.ವಿ. ನಾಗರಾಜ್ ಹೇಳಿದರು.
ಸೋಮವಾರಪೇಟೆ ರೋಟರಿ ಹಿಲ್ಸ್, ಕೊಡಗು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಾನಸ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ‘ಗ್ರಾಹಕ ಜಾಗೃತಿ ಕಾರ್ಯಾಗಾರ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾಗರಿಕರಿಗೆ ಇರುವ ಹಕ್ಕುಗಳಲ್ಲಿ ಬಳಕೆದಾರರ ಹಕ್ಕುಗಳು ಮುಖ್ಯ ಬಳಕೆದಾರರಿಗೆ ತಮ್ಮ ಹಕ್ಕು ಭಾದ್ಯತೆಗಳ ಬಗ್ಗೆ ತಿಳಿದಿರಬೇಕು ಎಂದರು. ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷ ಎ.ಎ. ಚಂಗಪ್ಪ ಮಾತನಾಡಿ, ಆಹಾರ ಕಲಬೆರಕೆಯ ವಿರುದ್ಧ ಕಾನೂನು ಬಲವಾಗಿದ್ದರೂ ಅದರ ಚಲಾವಣೆ ಸರಿಯಿಲ್ಲ. ಕಾನೂನು ಜಾರಿಗೆ ತರಬೇಕಾದ ಆಹಾರ ಪರಿವೀಕ್ಷಕರಿಗೇ ಸರಿಯಾದ ತರಬೇತಿಯಿಲ್ಲ. ಕಲಬೆರಕೆಯನ್ನು ರುಜುವಾತು ಮಾಡಲು ಆಹಾರ ವಿಶ್ಲೇಷಕರು ಇಲ್ಲ. ಪರಿಸ್ಥಿತಿಯನ್ನು ಬದಲಾಯಿಸಬೇಕಾದರೆ ಗ್ರಾಹಕರಲ್ಲಿ ಜಾಗೃತಿ ಮೂಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಗ್ರಾಹಕರ ವೇದಿಕೆಯ ಖಜಾಂಚಿ ಕೆ.ಎಂ. ಗಿರೀಶ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಸುಪರ್ಣ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಭರತ್ ಭೀಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ರುಬೀನಾ, ರೋಟರಿ ಸಂಸ್ಥೆ ಕಾರ್ಯದರ್ಶಿ ವನಮಾಲಿ ಹೆಬ್ಬಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಗ್ರಾಹಕ ಹಕ್ಕು ಮತ್ತು ಸಂರಕ್ಷಣೆ, ಆಹಾರ ಸುರಕ್ಷತೆ, ಆಹಾರ ಕಲಬೆರಕೆ ಪತ್ತೆ ಹಚ್ಚುವಿಕೆ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸ ಲಾಗಿತ್ತು. ಕಾರ್ಯಾಗಾರದಲ್ಲಿ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಕುಂಕುಮ ಜ್ಞಾನವಿಕಾಸ ಕೇಂದ್ರದ ಸದಸ್ಯರು ಪಾಲ್ಗೊಂಡಿದ್ದರು.