ಕೂಡಿಗೆ, ನ. 21: ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಭಕ್ತ ಕನಕದಾಸ ಪುರುಷ ಸ್ವ-ಸಹಾಯ ಸಂಘದ ವತಿಯಿಂದ ಕನಕ ಜಯಂತಿ ಆಚರಣೆ ಮಾಡಲಾಯಿತು.

ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಮಾತನಾಡಿ, ಕನಕದಾಸರ ಚಿಂತನೆ ಹಾಗೂ ಭಕ್ತಿಯ ಮಾರ್ಗವು ಇಂದಿನ ಬದುಕಿಗೆ ಮಾರ್ಗದರ್ಶಕವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಕುರುಬ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಕೆ. ವಸಂತ್ ಮಾತನಾಡಿ, ಕನಕದಾಸರ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವದರ ಮೂಲಕ ಅವರ ತತ್ವ ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಅಶ್ವಿನ್‍ಕುಮಾರ್, ಜಿಲ್ಲಾ ಕುರುಬ ಹಿತರಕ್ಷಣ ವೇದಿಕೆಯ ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಪ್ರಭಾಕರ್, ಸಮಿತಿಯ ಪ್ರಮುಖರಾದ ಬರಮಣ್ಣ ಬೆಟ್ಟಗೇರಿ, ರಂಗೇಗೌಡ, ಬೋರೆಗೌಡ, ರಾಮಣ್ಣ, ಕೆ.ಆರ್.ರವಿ, ತಮ್ಮಣ್ಣ ಸೇರಿದಂತೆ ಪ್ರಮುಖರುಗಳು ಇದ್ದರು. ಈ ಸಂದರ್ಭ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.