ಕೂಡಿಗೆ, ಅ. 1: ಕೂಡಿಗೆ ಯಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ (ಕಾಬ್ಸೆಟ್ ಸಂಸ್ಥೆ) ವತಿಯಿಂದ ಕಳೆದ ತಿಂಗಳುಗಳಲ್ಲಿ ಲಘು ವಾಹನ ತರಬೇತಿಯನ್ನು ಪಡೆದ ಅಭ್ಯರ್ಥಿಗಳಿಗೆ ಲೈಸೆನ್ಸ್ ವಿತರಣೆ ಮಾಡಲಾಯಿತು.

ಆರ್‍ಬಿಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಗೋಪಾಲ್ ಲೈಸೆನ್ಸ್ ವಿತರಣೆ ಮಾಡಿ ಮಾತನಾಡಿ, ಕಾಬ್ಸೆಟ್ ಸಂಸ್ಥೆಯ ವತಿಯಿಂದ ಸಾಮಾನ್ಯ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಗಳು, ಗ್ರಾಮೀಣ ಉದ್ಯಮಶೀಲರಾ ಅಭಿವೃದ್ಧಿ ಯೋಜನೆಗಳ ತರಬೇತಿಗಳು ನಡೆಯುತ್ತಿದ್ದು, ಇವುಗಳ ಬಗ್ಗೆ ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರು ಸ್ವ-ಉದ್ಯೋಗ ನಡೆಸಲು ಇಂತಹ ತರಬೇತಿಗಳನ್ನು ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿ ಕೊಳ್ಳಬೇಕೆಂದರು.

ವಲಯ ಕಾರ್ಪೋರೇಷನ್ ಬ್ಯಾಂಕಿನ ಪ್ರಬಂಧಕ ರಂಗಸ್ವಾಮಿ ಮಾತನಾಡಿ, ತರಬೇತಿ ಪಡೆದ ಯುವಕ-ಯುವತಿಯರಿಗೆ ಕಾರ್ಪೋರೇಷನ್ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಸ್ವ-ಉದ್ಯೋಗ ಪ್ರಾರಂಭಿಸಲು ಸಹಕರಿಸಲಾಗುವದು ಎಂದರು.

ಈ ಸಂದರ್ಭ ನಬಾರ್ಡ್‍ನ ಜನರಲ್ ಮ್ಯಾನೇಜರ್ ಗೋಪಾಲ್, ಜಿಲ್ಲಾ ನಬಾರ್ಡ್ ಅಧಿಕಾರಿ ನಾಣಯ್ಯ, ಕೂಡಿಗೆ ಕಾಬ್ಸೆಟ್ ಸಂಸ್ಥೆಯ ನಿರ್ದೇಶಕ ನಾಗೇಂದ್ರ ಸಹಾಯಕ ಅಧಿಕಾರಿಗಳಾದ ಸಲಾವುದ್ದೀನ್, ಅನಿಲ್ ಉಪಸ್ಥಿತರಿದ್ದರು.

ಇದೇ ವೇಳೆ ಲಘು ವಾಹನ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.