ಸುಂಟಿಕೊಪ್ಪ, ಸೆ. 8: ಮಹಿಳೆಯರಿಗೆ ಆತ್ಮಶಕ್ತಿ ತುಂಬಲು ಸ್ವಂತ ಕಾಲಲ್ಲಿ ನಿಂತು ಅರ್ಥಿಕವಾಗಿ ಸಬಲೀಕರಣವಾಗಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ರೈ ಹೇಳಿದರು.ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಹಾಗೂ ಕೆದಕಲ್ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಹಿಳೆಯರು ಆತ್ಮಾಭಿಮಾನದಿಂದ ಧೈರ್ಯದಿಂದ ಸಮಾಜದಲ್ಲಿ ತಲೆ ಎತ್ತಿ ಬದುಕಲು ಸ್ವಸಹಾಯ ಸಂಘ ಸಹಕಾರಿಯಾಗಿದೆ. ಎಲ್ಲಾ ಜಾತಿ ಧರ್ಮದವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿ ಹೊಂದಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು, ಸಮಾಜವನ್ನು ತಿದ್ದುವ ಕೆಲಸ ಸಂಘದ ಸದಸ್ಯರುಗಳು ಮಾಡಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯದ ನಿರ್ದೇಶಕ ಸೀತಾರಾಂ ಶೆಟ್ಟಿ ಮಾತನಾಡಿ, 1982 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗಡೆ ಅವರ ದೂರದೃಷ್ಟಿಯಿಂದ ಬಡವರ ಬದುಕಿಗೆ ಕಾಯಕಲ್ಪ ನೀಡಬೇಕೆಂಬ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪಿಸಿದರು. ಒಕ್ಕೂಟದವರು ರೂ. 5 ಕೋಟಿ ವ್ಯವಹಾರ 8 ವರ್ಷದಲ್ಲಿ ನಡೆಸಿದ್ದು, ಉತ್ತಮ ಸಂಘವಾಗಿ ಮಾರ್ಪಟ್ಟಿರುವದು ಸಂತಸದ ವಿಷಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ತಾ.ಪಂ. ಸದಸ್ಯೆ ವಿಮಲಾವತಿ ಮಾತನಾಡಿ, ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೇದಿಕೆ ಕಲ್ಪಿಸಿದೆ. ಸಂಘದ ಸದಸ್ಯರುಗಳು ತಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕೆಂದರು. ಸುಂಟಿಕೊಪ್ಪ ವೈಸ್‍ಮೈನ್ ಕ್ಲಬ್ ಅಧ್ಯಕ್ಷ ಡೆನ್ನಿಸ್ ಡಿಸೋಜ ಮಾತನಾಡಿ, ಭಾರತ ದೇಶದಲ್ಲಿ ಶೇ. 70 ರಷ್ಟು ಗ್ರಾಮೀಣ ಪ್ರದೇಶದ ನಿವಾಸಿ ಗಳಾಗಿದ್ದಾರೆ. ಸ್ವಾಸ್ಥ್ಯ ಸಂಕಲ್ಪ ರಾಷ್ಟ್ರದ ಅಭಿವೃದ್ಧಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವೀರೇಂದ್ರ ಹೆಗಡೆಯವರ ಕನಸಾಗಿದೆ. ಅದನ್ನು ನೆರವೇರಿಸಲು ಪ್ರತಿಯೊಬ್ಬ ಸದಸ್ಯರೂ ಶ್ರಮವಹಿಸಬೇಕೆಂದರು.

ಸೋಮವಾರಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಮಾತನಾಡಿ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬವನ್ನು ಮುಖ್ಯ ವಾಹಿನಿಗೆ ತರಲು ಸಂಘ ಹುಟ್ಟು ಹಾಕಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 2,165 ಸಂಘ ಇದ್ದು, 21,000 ಸದಸ್ಯರುಗಳಾಗಿ ಈ ಸಂಘದಲ್ಲಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಮುಖಾಂತರ ರೂ. 1 ಲಕ್ಷ 50,000 ವರೆಗೆ ಅದ್ಯತೆ ಮೇರೆ ಸಾ¯ ನೀಡಲಾಗುತ್ತಿದೆ. ಒಗ್ಗಟ್ಟಿನಿಂದ ಸದಸ್ಯರುಗಳು ತಮ್ಮ ಸಂಘವನ್ನು ಬಲಪಡಿಸಬೇಕೆಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ವಹಿಸಿ ಮಾತನಾಡಿ, ಮಹಿಳೆಯರ ಸ್ವಾಲಂಬನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನೀಡಿರುವ ಕೊಡುಗೆ ಅಲ್ಲದೆ ಸಂಘದಿಂದ ಮಹಿಳೆಯರು ಸ್ವಾವಲಂಬನೆ ಬದಕನ್ನು ಕಂಡು ಕೊಳ್ಳಲು ಸಹಾಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ನೂತನ ಸುಂಟಿಕೊಪ್ಪ ಹಾಗೂ ಕೆದಕಲ್ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಸ್.ಎಸ್. ಮುಸ್ತಫ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರುಗಳಾದ ಮಧು ನಾಗಪ್ಪ, ಗೀತಾದೇವಿ ಪದಾಧಿಕಾರಿಗಳು ಉಪಸ್ಥಿತರಿದ್ದರು.