ಮಡಿಕೇರಿ, ಡಿ.15: ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಕ್ಲಬ್ ಮಹೀಂದ್ರ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಜಾಗೃತಿ ಕಾರ್ಯಕ್ರಮವು ಗುರುವಾರ ನಗರದಲ್ಲಿ ನಡೆಯಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಅಭಿಯಾನಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಅವರು ರಸ್ತೆ ಬದಿ ಕಸ ತೆಗೆಯುವ ಮೂಲಕ ಚಾಲನೆ ನೀಡಿದರು. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛ ನಗರ, ಪಟ್ಟಣ, ಗ್ರಾಮ ಮಾಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರಥಮ ಹಂತದಲ್ಲಿ ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರದವರೆಗೆ ಈ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ. ಎರಡನೇ ಹಂತದಲ್ಲಿ ಸೋಮವಾರಪೇಟೆ, ವೀರಾಜಪೇಟೆ ಮತ್ತು ಗೋಣಿಕೊಪ್ಪ ಪಟ್ಟಣಗಳಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗುವದು ಎಂದು ಏಡುಕುಂಡಲು ತಿಳಿಸಿದರು.
ಪ್ರವಾಸಿಗರು ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಎಲ್ಲಿ ಬೇಕೆಂದರಲ್ಲಿ ಕಸ ಬಿಸಾಡುವದರಿಂದ ಎಲ್ಲೆಂದರಲ್ಲಿ ಕಸ ಕಡ್ಡಿಗಳು ಬಿದ್ದಿರುತ್ತವೆ.
(ಮೊದಲ ಪುಟದಿಂದ) ಜೊತೆಗೆ ಪ್ಲಾಸ್ಟಿಕ್ನ್ನು ಎಸೆದಿರುತ್ತಾರೆ. ಇದರಿಂದ ಪರಿಸರ ಹಾಳಾಗುವದರ ಜೊತೆಗೆ ಅಂತರ್ಜಲ ಸಂರಕ್ಷಣೆಗೂ ಧಕ್ಕೆಯಾಗಲಿದೆ. ಹಾಗಾಗಿ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಅವರು ಕೋರಿದರು. ಸ್ವಚ್ಛ ಭಾರತ ಅಭಿಯಾನದಡಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ಸ್ವಚ್ಛತೆ ಕಾಣಬಹುದು ಎಂದು ಸ್ವಚ್ಛತಾ ಜಾಗೃತಿ ಅಭಿಯಾನದ ಸಂಚಾಲಕ ರಾದ ಟಿ.ಜಿ.ಪ್ರೇಮ್ ಕುಮಾರ್ ಅವರು ಹೇಳಿದರು. ತಾ. 16 ರಂದು ಸುಂಟಿಕೊಪ್ಪ ಗದ್ದೆಹಳ್ಳ ಬಳಿಯಿಂದ ಎರಡನೇ ದಿನದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವು ಆರಂಭಗೊಳ್ಳಲಿದ್ದು, ಸುಂಟಿಕೊಪ್ಪ, ಕೊಡಗರಹಳ್ಳಿ, ಏಳನೇ ಹೊಸಕೋಟೆ, ಆನೆಕಾಡು ಅರಣ್ಯ, ಬಸವನಹಳ್ಳಿ, ಗುಡ್ಡೆಹೊಸೂರು ಮಾರ್ಗವಾಗಿ ಕುಶಾಲನಗರಕ್ಕೆ ಅಭಿಯಾನ ತೆರಳಲಿದೆ ಎಂದು ಅವರು ತಿಳಿಸಿದರು. ಕ್ಲಬ್ ಮಹೀಂದ್ರದ ಸಂಪನ್ಮೂಲ ಸಹಾಯಕರಾದ ನವೀನ್ ಅವರು ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತಾ ಕಾರ್ಯದಲ್ಲಿ ಕ್ಲಬ್ ಮಹೀಂದ್ರದಿಂದ 40 ಕ್ಕೂ ಹೆಚ್ಚು ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.