ಸುಂಟಿಕೊಪ್ಪ, ಅ. 9: ಲಯನ್ಸ್ ಕ್ಲಬ್‍ನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಸ್ವಚ್ಛ ಭಾರತಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಾಗೆಯೇ ಪ್ರತಿಯೊಬ್ಬರ ಆರೋಗ್ಯ ರಕ್ಷಣೆಗೆ ಜಾಗೃತಿ ಮೂಡಿಸಲಾಗುವದೆಂದು ಸಿ.ಕೆ. ರಕ್ಷಿತ್ ಹೇಳಿದರು.
ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ಲಯನ್ಸ್-ಲಯನೆಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಲಯನ್ಸ್ ವಲಯ ನಿರ್ದೇಶಕ ಸಿ.ಕೆ. ರಕ್ಷಿತ್ ಪ್ರತಿಯೊಬ್ಬರಿಗೂ ಆರೋಗ್ಯದ ಭಾಗ್ಯ ಇದ್ದರೆ ಮಾತ್ರ ಜೀವನದ ನಡೆ ಸರಿಯಾಗಿ ಸಾಗಲಿದೆ ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ಶಾಲೆಗಳಲ್ಲಿ, ಆಸ್ಪತ್ರೆಗಳಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಲು ಲಯನ್ಸ್ ಕ್ಲಬ್ ಸಹಾಯ ಹಸ್ತ ನೀಡುತ್ತಿದೆ. ಆಸ್ಪತ್ರೆ ಶಾಲೆಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಪ್ರತಿಯೊಬ್ಬ ಮಾನವನ ಆರೊಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಮುಂದಾಗುತ್ತಿದೆ. ಹಾಗೆಯೇ ಶಿಕ್ಷಣದಿಂದ ದೂರ ಇರುವ ಮಕ್ಕಳಿಗೆ ಮರಳಿ ಶಾಲೆಗಳಿಗೆ ಸೇರಿಸುವ ಕೆಲಸವನ್ನು ಪೋಷಕರು ಶಿಕ್ಷಕರೊಂದಿಗೆ ಲಯನ್ಸ್ ಸೇವೆ ಸಲ್ಲಿಸುವಂತೆ ತಿಳಿಸಿದರು.
ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ಶಾಶ್ವತ್ ಬೋಪಣ್ಣ ವಹಿಸಿದ್ದರು. ಸಂತ ಕ್ಲಾರ ಕನ್ಯಾಸ್ತ್ರಿ ಕಾನ್ವೆಂಟ್‍ನ ನಿವೃತ್ತ ಶಿಕ್ಷಕಿ ಸಿಸ್ಟರ್ ಮೆರಲಿನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಾರ್ವತಿ ವಸಂತ್ ಪ್ರಾರ್ಥಿಸಿ, ಶಾಶ್ವತ್ ಬೋಪಣ್ಣ ಸ್ವಾಗತಿಸಿ, ಗ್ಲೇನ್ ಮೇನೆಜೇಸ್ ವರದಿ ವಾಚಿಸಿ, ವಂದಿಸಿದರು.