ಭಾಗಮಂಡಲ, ಜ 23: ಮೂಲ ಕಾವೇರಿಯಿಂದ ರಾಜ್ಯದ ಗಡಿಭಾಗದ ತನಕ ಕಾವೇರಿ ನದಿ ತಟದ ಸಂಪೂರ್ಣ ವಾಸ್ತವಾಂಶದ ಚಿತ್ರಣ ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಯೋಜನೆ ರೂಪಿಸಿದೆ ಎಂದು ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ್ ತಿಳಿಸಿದ್ದಾರೆ. ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಭಾಗಮಂಡಲ, ತಲಕಾವೇರಿ ಮತ್ತಿತರ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ನದಿ ಮೂಲದಿಂದಲೇ ಕಲುಷಿತದೊಂದಿಗೆ ನೀರು ಮಾಲಿನ್ಯಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸ್ವಚ್ಛ ಕಾವೇರಿಗಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಭಾಗಮಂಡಲದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನದಿ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಹಯೋಗದೊಂದಿಗೆ ಈ ಯೋಜನೆ 3 ತಿಂಗಳ ಕಾಲ ನಡೆಯಲಿದ್ದು ಕೊಡಗು, ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಮೂಲಕ ಹಾದು ಹೋಗುವ ಕಾವೇರಿ ನದಿ ತಟಗಳಲ್ಲಿ ಈ ತಂಡ ನದಿ ಕಲುಷಿಕೆ ಬಗ್ಗೆ ಅಧ್ಯಯನ ನಡೆಸಿ ವರದಿ ತಯಾರಿಸಲಿದೆ. ನಂತರ ಮಂಡಳಿಗೆ ನೀಡಲ್ಪಡುವ ವರದಿಯ ಆಧಾರದಲ್ಲಿ ಕಾರ್ಯಯೋಜನೆ ರೂಪುಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ್ ಮತ್ತು ಅಧಿಕಾರಿಗಳ ತಂಡ, ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಗದೀಶ್ ಕುಮಾರ್ ಅವರೊಂದಿಗೆ ಮಂಡಳಿ ಅಧಿಕಾರಿಗಳ ತಂಡ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕ್ಷೇತ್ರ ಹಾಗೂ ನದಿ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಎರಡೂ ಕ್ಷೇತ್ರಗಳಲ್ಲಿ ಶೌಚಾಲಯದ ಸ್ಥಿತಿಗತಿಗಳ ಬಗ್ಗೆ ವೀಕ್ಷಿಸಿದ ಮಂಡಳಿ ತಂಡ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಡೆ ಎಸೆಯದಂತೆ ಸೂಚನಾ ಫಲಕಗಳನ್ನು ಅಳವಡಿಸಲು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭ ಮಂಡಳಿ ಸದಸ್ಯ ಜೆ.ಜಿ. ಕಾವೇರಿಯಪ್ಪ, ಹಿರಿಯ ಅಧಿಕಾರಿಗಳಾದ ಲಿಂಗರಾಜು, ಗಣೇಶನ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ ್ರಮೋಹನ್, ದೇವಾಲಯ ಪಾರುಪತ್ತೆದಾರರಾದ ಕೆ.ಪಿ.ಪೊನ್ನಪ್ಪ, ಕೆ.ಎನ್.ಪಾಪಯ್ಯ, ಜಗ್ಗ ಅವರುಗಳು ಇದ್ದರು.