ಕುಶಾಲನಗರ, ಜ 27: ಕೂಡಿಗೆ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ ನದಿಗೆ ಕಸ ಹಾಕುವವರಿಗೆ ದಂಡ ವಿಧಿಸುವ ಮೂಲಕ ಸ್ವಚ್ಛತೆ ಕಾಪಾಡಲು ಪಂಚಾಯಿತಿ ಆಡಳಿತ ಮಂಡಳಿ ನಿರ್ಧರಿಸಿದೆ. ಪಂಚಾಯಿತಿ ಅಧ್ಯಕ್ಷೆ ಹೆಚ್.ಸಿ. ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಮಾಂಸ ಮಳಿಗೆ, ಸಲೂನ್ ಸೇರಿದಂತೆ ಬಾರ್ ಮತ್ತು ಹೋಟೆಲ್ಗಳಿಂದ ಸಂಗ್ರಹವಾಗುವ ಕಸ ತ್ಯಾಜ್ಯವನ್ನು ಹಾರಂಗಿ ನದಿಗೆ ಬಿಸಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ನದಿ ಕಲುಷಿತಗೊಳಿಸುತ್ತಿರುವವರಿಗೆ ಪಂಚಾಯಿತಿ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದೆ. ಸ್ವಚ್ಛ್ಚತೆ ಕಾಪಾಡುವಂತೆ ಪಂಚಾಯಿತಿ ವತಿಯಿಂದ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸುವ ದರೊಂದಿಗೆ ನದಿಗೆ ಕಸವನ್ನು ಬಿಸಾಡುವವರಿಗೆ 1 ಸಾವಿರ ರೂಗಳ ದಂಡ ವಿಧಿಸಲು ಸಭೆ ತೀರ್ಮಾನಿಸಿತು. ಅಗತ್ಯ ಬಿದ್ದಲ್ಲಿ ನದಿ ಮೇಲ್ಭಾಗದ ಸೇತುವೆ ಬಳಿ ಸಿಸಿ ಕ್ಯಾಮೆರಾ ಅಳವಡಿಸಿ ಅಶುಚಿತ್ವಕ್ಕೆ ಕಾರಣರಾಗುವವರ ಪತ್ತೆಹಚ್ಚಲು ಸಲಹೆಗಳು ಕೂಡ ಕೆಲವು ಸದಸ್ಯರಿಂದ ಕೇಳಿಬಂದವು.
ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೆ ಕೊರೆದಿರುವ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೂಡಲೆ ಕ್ರಮಕೈಗೊಳ್ಳಬೇಕು. ಸಭೆಯ ನಿರ್ಣಯಗಳನ್ನು ಆಗಿಂದಾಗೆ ದಾಖಲಾತಿ ಪುಸ್ತಕದಲ್ಲಿ ನಮೂದಿಸಿ ಸಭೆಯಲ್ಲಿ ಸದಸ್ಯರಿಂದ ಸಹಿ ಸಂಗ್ರಹಿಸುವಂತೆ ಸದಸ್ಯ ರಾಮಚಂದ್ರ ಆಗ್ರಹಿಸಿದರು.
ನೂತನ ಬಡಾವಣೆ ನಿರ್ಮಾಣದ ಮೂಲಕ ಪಂಚಾಯಿತಿಗೆ ದೊರೆಯುವ ಅಭಿವೃದ್ಧಿ ಶುಲ್ಕ ಪರಿಷ್ಕರಣೆ, ಪಂಚಾಯಿತಿ ವ್ಯಾಪ್ತಿಯ ಬೀದಿ ದೀಪಗಳ ದುರಸ್ತಿ, ಕುಡಿಯುವ ನೀರು ಪೂರೈಕೆ, ಕಟ್ಟಡ ಕಾಮಗಾರಿಗಳಿಗೆ ನಿರಾಪೇಕ್ಷಣಾ ಪತ್ರ ಒದಗಿಸುವ ಕುರಿತಾಗಿ ಚರ್ಚೆಗಳು ನಡೆದವು.
ಪಂಚಾಯಿತಿ ಉಪಾಧ್ಯಕ್ಷ ಕೆ.ಟಿ. ಗಿರೀಶ್, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ರವೀಶ್ ಇದ್ದರು.