ಶನಿವಾರಸಂತೆ, ನ. 8: ಕಾಫಿ ತೋಟಗಳಲ್ಲಿ ಕಂಡು ಬರುವ ಶಂಕು ಹುಳಗಳ ಬಾಧೆ ನಿಯಂತ್ರಣ ಸಾಮೂಹಿಕ ಸ್ವಚ್ಛತಾ ಆಂದೋಲನ ಮತ್ತು ಸಂಘಟನೆಯಿಂದ ಸಾಧ್ಯ ಎಂದು ಸೋಮವಾರಪೇಟೆ ಕಾಫಿ ಮಂಡಳಿ ಹಿರಿಯ ಸಂಪರ್ಕ ಅಧಿಕಾರಿ ಮುರುಳೀಧರ್ ಹೇಳಿದರು.

ಸಮೀಪದ ಬೆಳ್ಳಾರಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಹಂಡ್ಲಿ ಪಂಚಾಯಿತಿ ಕಾಫಿ ಬೆಳೆಗಾರರ ಸಂಘದ ವತಿಯಿಂದ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅವರು ಹೇಳಿದರು. ಹಂಡ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಶಂಕು ಹುಳುಗಳ ಬಾಧೆ-ನಿಯಂತ್ರಣ ಕುರಿತು ಬೆಳೆಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ನಿಯಂತ್ರಣಕ್ಕೆ ಸಲಹೆ ನೀಡಿದರು.

ಮಳೆಗಾಲದಲ್ಲಿ ತೇವಾಂಶವಿರುವ ನದಿ, ಕೆರೆ ಬಳಿ ಹುಳುಗಳು ಅಧಿಕವಾಗಿದ್ದು, ಹುಳುಗಳನ್ನೂ ಸುಟ್ಟು ಹಾಕಬಹುದು. ನೀರಿನ ಕೊರತೆ ಉಂಟು ಮಾಡಿ ನಿಯಂತ್ರಿಸಬಹುದು. 7 ಅಡಿ ಆಳದ ಗುಂಡಿ ತೆಗೆದು ಕೈಗಳಿಗೆ ಗ್ಲೌಸ್ ಧರಿಸಿ, ಹುಳುಗಳನ್ನು ಹಿಡಿದು ಹಾಕಿ ಮೈಲ್‍ತುತ್ತು, ಕಪ್ಪೆ ಚಿಪ್ಪಿನ ಸುಣ್ಣ, ಕಲ್ಲುಪ್ಪು, ಬ್ಲೀಚಿಂಗ್ ಪೌಡರ್ ಹಾಕಿ ನಾಶಪಡಿಸಬಹುದು. ಕೋಳಿ ಸಾಕಾಣಿಕೆ, ಹೈನುಗಾರಿಕೆಯಿಂದಲೂ ಹುಳುಗಳ ನಿಯಂತ್ರಣ ಸಾಧ್ಯ ಎಂದರು.

ಸರಕಾರದ ನಿಯಮದಂತೆ ಆಹಾರ ಪದಾರ್ಥಗಳ ಬೆಳೆಗೆ ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸಲು ಸಾಧ್ಯ. ವಾಣಿಜ್ಯ ಬೆಳೆಗಳಿಗೆ ಬರುವದಿಲ್ಲ ಎಂದು ಮುರುಳೀಧರ್ ಹೇಳಿದರು.

ಕಾಫಿ ಮಂಡಳಿ ಉಪನಿರ್ದೇಶಕ ರಾಮಗೌಂಡರ್ ಮಾತನಾಡಿ, ಶಂಕು ಹುಳುಗಳ ನಿಯಂತ್ರಣಕ್ಕೆ ಕಾಫಿ ತೋಟಗಳಲ್ಲಿ ನೆರಳನ್ನು ನಿಯಂತ್ರಿಸಬೇಕು, ಹುಳುಗಳನ್ನು ಹಿಡಿಯಲು ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳಬಹುದು ಎಂದರು.

ಬೆಳೆಗಾರರಾದ ಮೋಹನ್ ಪ್ರದೀಪ್, ಎಸ್.ಕೆ. ಶಿವಪ್ಪ, ಆನಂದಸ್ವಾಮಿ, ಬಿ.ಎಸ್. ಪ್ರದೀಪ್, ಹೆಚ್.ಬಿ. ಜಯಮ್ಮ, ಶಿವಶಂಕರ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಂಡ್ಲಿ ಗ್ರಾ.ಪಂ.ಅಧ್ಯಕ್ಷ ಹೆಚ್.ಎನ್. ಸಂದೀಪ್, ಉಪಾಧ್ಯಕ್ಷ ದಯಾಕರ್, ವೀರೇಂದ್ರ ಕುಮಾರ್, ಬಿ.ಕೆ. ಚಿಣ್ಣಪ್ಪ, ಕೆ.ಎಂ. ನಾಗರಾಜ್, ಸೋಮವಾರ ಪೇಟೆ ಕಾಫಿ ಮಂಡಳಿ ವಿಸ್ತರಣಾಧಿಕಾರಿ ಮಾಚಯ್ಯ, ಶನಿವಾರಸಂತೆ ಕಾಫಿ ಮಂಡಳಿ ಅಧಿಕಾರಿಗಳಾದ ಎಮಿ ವರ್ಗೀಸ್, ಶ್ರೀಜಿತ್ ಉಪಸ್ಥಿತರಿದ್ದರು.