ಮಡಿಕೇರಿ, ಸೆ. 20: ಕೇಂದ್ರ ಸರ್ಕಾರದಿಂದ ಗ್ರಾಮೀಣ ಸ್ವಚ್ಛತಾ ರ್ಯಾಂಕಿಂಗ್ ಪಟ್ಟಿಯಲ್ಲಿ ದೇಶದ 75 ಜಿಲ್ಲೆಗಳ ಪಟ್ಟಿಯಲ್ಲಿ ಕೊಡಗು ಜಿಲ್ಲೆ 11ನೇ ಸ್ಥಾನ ಪಡೆದಿದೆ. ದೇಶದ ಸ್ವಚ್ಛ ನಗರಗಳ ರೀತಿಯಲ್ಲೇ ಸ್ವಚ್ಛ ಗ್ರಾಮೀಣ ಪ್ರದೇಶಗಳಿಗೆ ರ್ಯಾಂಕಿಂಗ್ ನೀಡಿದ್ದಾರೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ, ಈ ವರದಿ ಬಿಡುಗಡೆ ಮಾಡಿದೆ. ದೇಶದ 75 ಜಿಲ್ಲೆಗಳ ರ್ಯಾಂಕಿಂಗ್ ಬಿಡುಗಡೆ ಮಾಡಿದ್ದಾರೆ. ಈ ಪೈಕಿ ಕೊಡಗು ಜಿಲ್ಲೆ ಶೇ. 88.1 ಅಂಕದ ಜೊತೆಗೆ 11 ನೇ ಸ್ಥಾನ ಪಡೆದಿದೆ. ಕ್ವಾಲಿಟಿ ಕೌನ್ಸಿಲ್ ಆಪ್ ಇಂಡಿಯಾ (ಕಿಅI) ಸಂಸ್ಥೆಯವರು ನಡೆಸಿದ ಸಮೀಕ್ಷೆಯು ಹಲವು ಮಾನದಂಡಗಳ ಆಧಾರದ ಮೇಲೆ ಜಿಲ್ಲೆಗಳಿಗೆ ತಂಡಗಳು ಮೇ ತಿಂಗಳಲ್ಲಿ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿತ್ತು.
ದೇಶದಲ್ಲಿ ಶೌಚಾಲಯ ನಿರ್ಮಾಣದ ಉತ್ತಮ ಸಾಧನೆ ಮತ್ತು ಐ.ಎಂ.ಐ.ಎಸ್.ನಲ್ಲಿ ಪ್ರಗತಿ ದಾಖಲಿಸಿದ 75 ಅತ್ಯುತ್ತಮ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷೆಯಲ್ಲಿ ಸುರಕ್ಷತೆ ಶೌಚಾಗೃಹಗಳ ಲಭ್ಯತೆ, ಮನೆಯ ಸುತ್ತ ಕಸ ಇಲ್ಲದಿರುವದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಇಲ್ಲದಿರುವದು, ಮನೆಯ ಸುತ್ತ ನೀರು ನಿಲ್ಲದಿರುವದರ ಬಗೆಗಿನ ಅಂಶಗಳ ಆಧಾರದಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ “ಸ್ವಚ್ಛ ಸರ್ವೆಕ್ಷಣ್ ಗ್ರಾಮೀಣ್-2016” ವರದಿ ಸಿದ್ಧಪಡಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಸಮೀಕ್ಷಾ ಮಾನದಂಡದಂತೆ ಗಳಿಸಿದ ಅಂಕಗಳ ವಿವರ ಇಂತಿದೆ: ಸುರಕ್ಷತಾ ಶೌಚಾ ಗೃಹಗಳ ಲಭ್ಯತೆಯ 40 ಅಂಕಗಳಲ್ಲಿ ಗಳಿಸಿದ ಅಂಕಗಳು 35.6 ಪಡೆದು ಶೇ. 89 ರಷ್ಟು, ಮನೆಯ ಸುತ್ತ ಕಸ ಇಲ್ಲದಿರುವದು 30 ಅಂಕಗಳಲ್ಲಿ 27.5 ರಷ್ಟು ಪಡೆದು ಶೇ.92, ಸಾರ್ವಜನಿಕ ಸ್ಥಳಗಳಲ್ಲಿ ಕಸವಿಲ್ಲದಿರುವ ಬಗ್ಗೆ 20 ಅಂಗಗಳಿಗೆ 15.6 ರಷ್ಟು ಅಂಕಗಳನ್ನು ಪಡೆದು ಶೇ. 78 ರಷ್ಟು ಹಾಗೂ ಮನೆಯ ಸುತ್ತ ನೀರು ನಿಲ್ಲದಿರುವದು ಸಂಬಂಧ 10 ಅಂಕಗಳಿಗೆ 9.4 ರಷ್ಟು ಅಂಕ ಪಡೆದು ಶೇ.94 ರಷ್ಟು ಪಡೆದಿದೆ. ಒಟ್ಟು 100 ಅಂಕಗಳಿಗೆ 88.1 ಅಂಕಗಳನ್ನು ಗಳಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಾರುಲತಾ ಸೋಮಲ್ ಮಾಹಿತಿ ನೀಡಿದ್ದಾರೆ.