ಮಡಿಕೇರಿ, ಜ.20 : ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಾಗಿ ಪಾಲೆಮಾಡು ಪೈಸಾರಿಯಲ್ಲಿ ಸ್ಮಶಾನಕ್ಕೆ 2 ಎಕರೆ ಜಾಗವನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ತಾ.24 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವದಾಗಿ ಬಹುಜನ ಕಾರ್ಮಿಕರ ಸಂಘ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಶವಗಳನ್ನು ಸಂಸ್ಕಾರ ಮಾಡುತ್ತಿದ್ದ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಗುರುತಿಸಿರುವದು ದಲಿತರ ಮೇಲೆ ನಡೆಸುತ್ತಿರುವ ದೌರ್ಜನ್ಯವೆಂದು ಆರೋಪಿಸಿದರು. ಕೆಲವು ದಿನಗಳ ಹಿಂದೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಶವ ಸಂಸ್ಕಾರದ ಜಾಗವನ್ನೇ ಸ್ಮಶಾನಕ್ಕಾಗಿ ಮಂಜೂರು ಮಾಡುವದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಜಾಗ ಮಂಜೂರಾತಿಯ ಪ್ರಕ್ರಿಯೆ ನಡೆಯದೇ ಇರುವದರಿಂದ ತಾ.24 ರಿಂದ ಪಾಲೇಮಾಡಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿರುವದಾಗಿ ಅವರು ತಿಳಿಸಿದರು.
ತಾ.24 ರಿಂದ ಆರಂಭಗೊಳ್ಳುವ ಅಮರಣಾಂತ ಉಪವಾಸ ಸತ್ಯಾಗ್ರಹದಿಂದ ಏನಾದರೂ ಅನಾಹುತಗಳು ಸಂಭವಿಸಿದಲ್ಲಿ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ನೇರ ಹೊಣೆಯಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹೊದ್ದೂರು ಗ್ರಾ.ಪಂ ಉಪಾಧ್ಯಕ್ಷರಾದ ಕುಸುಮ ಮಾತನಾಡಿ ಗ್ರಾಮದಲ್ಲಿ ಗುಂಪುಗಾರಿಕೆ ಹೆಚ್ಚಾಗಿರುವದರಿಂದ ಬಡ ಜನತೆಗೆ ಮೂಲಭೂತ ಸೌಲಭ್ಯಗಳನ್ನು ನೀಡುವದಕ್ಕೂ ಅಡ್ಡಿ ಆತಂಕಗಳು ಎದುರಾಗಿದೆ ಎಂದು ಆರೋಪಿಸಿದರು.
ಪಾಲೇಮಾಡಿನಲ್ಲಿ ವಾಸಿಸುತ್ತಿರುವ ಬಡಕುಟುಂಬಗಳ ನಿವೇಶನಗಳಿಗೆ ಕಂದಾಯ ನಿಗಧಿ ಮಾಡಬೇಕೆಂದು ಪ್ರಮುಖರು ಇದೇ ಸಂದರ್ಭ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಎಸ್.ಆನಂದ, ಉದಯ, ಮಹಮ್ಮದ್ ಹಾಗೂ ಮಹೇಶ್ ಉಪಸ್ಥಿತರಿದ್ದರು.