ಮೂರ್ನಾಡು, ಡಿ. 23 : ಪಾಲೇಮಾಡು ಪೈಸಾರಿ ಗುಡಿಸಲು ನಿವಾಸಿಗಳು ಸ್ಮಶಾನ ಜಾಗ ಬಿಟ್ಟು ಕೊಡುವಂತೆ ಮೃತ ಶರೀರವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಾಲೇಮಾಡುವಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೊಡಗಿನಲ್ಲಿ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಸರ್ವೆ ನಂ. 167/1ಎ ರಲ್ಲಿನ ಪೈಸಾರಿ ಜಾಗದಲ್ಲಿ ಸ್ಥಳ ಗುರುತಿಸಿ ಸಂಸ್ಥೆಯ ಹೆಸರಿಗೆ 12.70 ಏಕರೆ ಜಾಗವನ್ನು ನೀಡಲಾಗಿದೆ. ಕಳೆದ ಹತ್ತು ವರ್ಷ ಗಳಿಂದ ವಸತಿ ರಹಿತ ಕುಟುಂಬಗಳು ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಮಾಡುತ್ತಿದ್ದು, ಸ್ಮಶಾನಬೇಕೆಂಬ ಉದ್ದೇಶದಿಂದ ಸ್ಥಳೀಯ ನಿವಾಸಿಗಳು 2 ಎಕರೆ ಜಾಗವನ್ನು ಬೇಲಿ ಹಾಕಿಕೊಂಡು ಶವ ಸಂಸ್ಕಾರಗಳನ್ನು ನಡೆಸುತ್ತಿದ್ದರು.
ಸ್ಟೇಡಿಯಂ ನಿರ್ಮಾಣಕ್ಕೆ ಮಂಜೂರಾಗಿರುವ ಜಾಗದಲ್ಲಿ ಸ್ಮಶಾನ ಜಾಗ ಇದ್ದು, ಸ್ಥಳೀಯರು ಸ್ಮಶಾನ ಜಾಗವನ್ನು ಬಿಟ್ಟು ಕೊಡುವಂತೆ ಅನೇಕ ಬಾರಿ ಪ್ರತಿಭಟನೆ ನಡೆಸಿದರು. ಶುಕ್ರವಾರ ಬೆಳಿಗ್ಗೆ ಪೈಸಾರಿ ಗುಡಿಸಲು ನಿವಾಸಿ ತಿಮ್ಮಪ್ಪ (82) ಎಂಬವರು ಮೃತಪಟ್ಟಿದ್ದು, ಶವ ಸಂಸ್ಕಾರಕ್ಕೆ ಬಳಸುತ್ತಿದ್ದ ಸ್ಮಶಾನದಲ್ಲೇ ನಡೆಯಬೇಕು ಎಂದು ನಿವಾಸಿಗಳು ಶವವನ್ನಿಟ್ಟು ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ 3 ಗಂಟೆಯ ವೇಳೆಗೆ ನಿವಾಸಿಗಳು ಮೃತ ಶರೀರವನ್ನು ಸ್ಟೇಡಿಯಂ ಜಾಗದಲ್ಲಿರುವ ಸ್ಮಶಾನಕ್ಕೆ ತರುತ್ತಿರುವ ಸಮಯದಲ್ಲಿ ಪೊಲೀಸರು ತಡೆಯೊಡ್ಡಿದರು. ನಿವಾಸಿಗಳು ಸ್ಮಶಾನಕ್ಕೆ ತೆರಳುವ ದಾರಿಯಲ್ಲಿ ಮೃತದೇಹವನ್ನಿರಿಸಿ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಸ್ಮಶಾನ ಜಾಗದಲ್ಲೇ ಶವ ಸಂಸ್ಕಾರ ನಡೆಸಲು ಬಿಡಬೇಕು ಇಲ್ಲದಿದ್ದರೆ ಎಷ್ಟು ದಿನಗಳಾದರೂ ಶವವನ್ನಿಟ್ಟು ಪ್ರತಿಭಟನೆ ನಡೆಸುತ್ತೇವೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ತಹಶೀಲ್ದಾರ್ ಕುಸುಮಾ ಆಗಮಿಸಿ ಪಾಲೇಮಾಡು ನಿವಾಸಿಗಳಿಗೆ ವಾಟೆಕಾಡುವಿನಲ್ಲಿ ಸ್ಮಶಾನ ಜಾಗ ನೀಡಲಾಗಿದೆ. ಅಲ್ಲಿ ಶವ ಸಂಸ್ಕಾರ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನಿವಾಸಿಗಳು ಮೃತ ವ್ಯಕ್ತಿಯ ಪತ್ನಿ ಹಾಗೂ ಒಬ್ಬ ಪುತ್ರನ ಶವ ಸಂಸ್ಕಾರ ಇದೇ ಸ್ಥಳದಲ್ಲಿ ನಡೆಸಲಾಗಿದೆ. ನಮಗೆ ಇದೇ ಸ್ಥಳದಲ್ಲಿ ತಿಮ್ಮಪ್ಪ ಅವರ ಶವ ಸಂಸ್ಕಾರ ನಡೆಯಬೇಕಾಗಿದೆ. ಜೀವಂತವಾಗಿರುವಾಗ ತಿಮ್ಮಪ್ಪ ಅವರು ತನ್ನ ಮಗ ಹಾಗೂ ಪತ್ನಿ ಇರುವ ಕಡೆಯಲ್ಲೇ ಶವ ಸಂಸ್ಕಾರ ನಡೆಸಬೇಕು ಎಂದು ತಿಳಿಸಿದ್ದಾರೆ. ಇದೇ ಸ್ಥಳದಲ್ಲಿ ಅವರ ಶವ ಸಂಸ್ಕಾರ ನಡೆಯಬೇಕಿದೆ ಎಂದು ಪ್ರತಿಭಟಿಸಿದರು.
ವಾಟೆಕಾಡುವಿನಲ್ಲಿ ಹೊಳೆ ಬದಿಯಲ್ಲಿ ಸ್ಮಶಾನ ನೀಡಲಾಗಿದ್ದು, ನಮ್ಮಗೆ ಅಲ್ಲಿರುವ ಸ್ಮಶಾನ ಬೇಡ. ನಾವುಗಳು ಕಳೆದ ಹತ್ತು ವರ್ಷಗಳಿಂದ ಬಳಸಿಕೊಂಡು ಬರುತ್ತಿದ್ದ ಸ್ಮಶಾನ ಜಾಗ ನಾವು ಬಿಟ್ಟುಕೊಡುವದಿಲ್ಲ. ನಿವಾಸಿಗಳ ಅನೇಕ ಮಂದಿಯ ಶವ ಸಂಸ್ಕಾರ ಇದೇ ಸ್ಥಳದಲ್ಲಿ ನಡೆಸಲಾಗಿದೆ. ಶವ ಇಲ್ಲಿಯೇ ಇಟು ್ಟಕೊಂಡು ಸ್ಮಶಾನಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ಮುಖಂಡ ಮೊಣ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂಜುಂಡ ಸ್ಥಳಕ್ಕೆ ಆಗಮಿಸಿ ಮೌನಕ್ಕೆ ಶರಣಾಗಿದ್ದರು. ಕತ್ತಲೆ ಕವಿದರೂ ಪ್ರತಿಭಟನಾಕಾರರು ಶವವನ್ನು ಸ್ಥಳದಲ್ಲೇ ಇರಿಸಿ ಪ್ರತಿಭಟನೆ ಮುಂದುವರೆಸಿದರು. ಮಡಿಕೇರಿ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ಉಪನಿರೀಕ್ಷಕ ಶಿವಪ್ರಕಾಶ್ ಹಾಜರಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.