ಮಡಿಕೇರಿ, ಆ. 20: ರಾಜ್ಯ ನಾಲ್ಕನೇ ಹಣಕಾಸು ಆಯೋಗದ ಆದೇಶದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಸಂಬಂಧ ಅಗತ್ಯ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಬೇಕಿದ್ದು, ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿ ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ನಂಜುಂಡೇ ಗೌಡ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 4 ನೇ ಹಣಕಾಸು ಆಯೋಗ ಪ್ರಶ್ನಾವಳಿಗೆ ಸಂಬಂಧಿಸಿ ದಂತೆ ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳಿಗೆ ನಡೆದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಲ್ಕನೇ ಹಣಕಾಸು ಆಯೋಗದ ನಿರ್ದೇಶನದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರಶ್ನಾವಳಿಯನ್ನು ಕಳುಹಿಸಿಕೊಡಲಾಗುವದು. ಪಶ್ನಾವಳಿಯನ್ನು ಕೂಲಂಕಶವಾಗಿ ಪರಿಶೀಲಿಸಿ ಭರ್ತಿ ಮಾಡಿ ಮಾಹಿತಿ ಒದಗಿಸಬೇಕು. ಈ ಬಗ್ಗೆ ಪ್ರಶ್ನಾವಳಿಗೆ ಉತ್ತರಗಳನ್ನು ಆನ್‍ಲೈನ್‍ನಲ್ಲಿ ಭರ್ತಿ ಮಾಡುವ ಕ್ರಮದ ಬಗ್ಗೆ ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಅಕೌಂಟೆಂಟ್ ಕನ್ಸಲ್‍ಟೆಂಟ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಿಳಿದುಕೊಂಡು ಕಾರ್ಯ ಪ್ರವೃತ್ತರಾಗಬೇಕು ಎಂದು ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಹೇಳಿದರು.

ಸ್ಥಳೀಯ ಸಂಸ್ಥೆಗಳು ನೀಡುವ ಮಾಹಿತಿ ಆಧಾರದಲ್ಲಿ ಅನುದಾನ ಹಂಚಿಕೆಗೆ ಅನುಕೂಲವಾಗಲಿದೆ. ಆದ್ದರಿಂದ ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಮಾರ್ಗಸೂಚಿಗಳನ್ನು ನಿಖರವಾಗಿ ಭರ್ತಿ ಮಾಡಿ ಕೂಡಲೇ ಒದಗಿಸುವಂತೆ ಉಪ ವಿಭಾಗಾಧಿಕಾರಿ ಸೂಚನೆ ನೀಡಿದರು.

ಕೇಂದ್ರ ಮತ್ತು ರಾಜ್ಯಗಳ ನಡುವಣ ಹಣಕಾಸು ಸಂಬಂಧವನ್ನು ನಿರ್ವಹಿಸುವದಕ್ಕೆ ಸಂವಿಧಾನದಲ್ಲಿ ಪ್ರದತ್ತವಾಗಿರುವಂತೆ ಕೇಂದ್ರ ಹಣಕಾಸು ಆಯೋಗವನ್ನು ರಚಿಸಲಾಗಿರುತ್ತದೆ, ಅದರಂತೆ 4ನೇ ಕೇಂದ್ರ ಹಣಕಾಸು ಆಯೋಗವು 2020 ರ ವರೆಗಿನ ರಾಜ್ಯದ ಸ್ಥಳೀಯ ಸಂಸ್ಥೆಗಳು ಶಿಫಾರಸ್ಸು ಮಾಡಿರುವಂತೆ ವಿವಿಧ ಕಾರ್ಯ ಯೋಜನೆಗಳನ್ನು ರೂಪಿಸಿದೆ. ಸ್ಥಳೀಯ ಸಂಸ್ಥೆಗಳು ವಿಧಿಸಬಹುದಾದ ಮತ್ತು ಸಂಗ್ರಹಿಸಿಕೊಳ್ಳಬಹುದಾದ ತೆರಿಗೆ, ಸುಂಕ. ಮತ್ತು ಶುಲ್ಕಗಳ ಬಗ್ಗೆ ಶಿಫಾರಸ್ಸು ಮಾಡುವದು ಮತ್ತು ಸ್ಥಳೀಯ ಸಂಸ್ಥೆಗಳ ಹಣಕಾಸು ಸ್ಥಿತಿಗತಿಗಳ ಉತ್ತಮ ಪಡಿಸುವ ಸಂಬಂಧ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಲ್ಲಿ ಕ್ರಮವಹಿಸಬೇಕು ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ವಿವರಣೆ ಆಯೋಗದ ಮೇಲಾಧಿಕಾರಿಗಳು ಹಾಗೂ ಸಮಾಲೋಚಕರಲ್ಲಿ ಸಂಪರ್ಕಿಸುವದು ಅಗತ್ಯವಾಗಿದೆ ಎಂದು ಸಲಹೆ ಮಾಡಿದರು.

ನಗರಾಭಿವೃದ್ಧಿ ಯೋಜನಾ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ.ಎಂ. ರವಿಕುಮಾರ್ ಮಾತನಾಡಿಮ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದ ನಾಲ್ಕನೇ ಹಣಕಾಸು ಆಯೋಗದ ಸದಸ್ಯರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. 4,ನೇ ಹಣಕಾಸು ಆಯೋಗದ ಪ್ರಶ್ನಾವಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕ್ರೋಡೀಕರಿಸಿ ಆಯೋಗಕ್ಕೆ ಕಳುಹಿಸುವ ಕಾರ್ಯ ಆಗಬೇಕಿದೆ ಎಂದರು. ಸ್ಥಳೀಯ ಸಂಸ್ಥೆಗಳಲ್ಲಿ ಹಣಕಾಸು ಸ್ಥಿತಿಗತಿ, ಭವಿಷ್ಯತ್ತಿನ ಕಾರ್ಯ ಯೋಜನೆಗಳ ಬಗ್ಗೆ ಪ್ರಶ್ನಾವಳಿಯಲ್ಲಿ ತುಂಬುವಂತೆ ಆಗಬೇಕು ಎಂದು ರವಿಕುಮಾರ್ ಅವರು ತಿಳಿಸಿದರು. ನಗರಸಭೆ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಹಲವು ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ವಿವಿಧ ಇಲಾಖೆಯ ಅಧಿಕಾರಿಗಳು, ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಅಕೌಂಟೆಂಟ್ ಕನ್ಸಲ್‍ಟೆಂಟ್ ಮತ್ತಿತರರು ಇದ್ದರು.