ಶ್ರೀಮಂಗಲ, ಡಿ. 15 : ದ.ಕೊಡಗಿನ ಕೊಂಗಣ ಪೊಳೆ ನದಿಯನ್ನು ಕೊಲ್ಲಿತೋಡು ಮೂಲಕ ಲಕ್ಷ್ಮಣ ತೀರ್ಥ ನದಿಗೆ ಸಂಪರ್ಕಿಸುವ ನದಿ ತಿರುವು ಯೋಜನೆ ಜಿಲ್ಲೆಯ ಜನತೆಯನ್ನು ಹಾಗೂ ಜನಪ್ರತಿನಿಧಿಗಳನ್ನು ಕತ್ತಲೆಯಲ್ಲಿಟ್ಟು ಮಾಡಲಾಗುತ್ತಿದೆ. ಜಿಲ್ಲೆಯ ಜನರಿಗೆ ಹಾಗೂ ಪರಿಸರಕ್ಕೆ ಹಾನಿ ಮಾಡುವ ಯಾವದೇ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗುವದು ಎಂದು ಹುದಿಕೇರಿ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.

ಹುದಿಕೇರಿ ಸ.ಹಿ.ಪಾ. ಶಾಲೆ ಸಭಾಂಗಣದಲ್ಲಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಹುದಿಕೇರಿ ಹೋಬಳಿ ಜನಸಂಪರ್ಕ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಯಿತು.

ತಾ.ಪಂ. ಸದಸ್ಯ ಬೊಟ್ಟಂಗಡ ರಾಜು, ಡಿ.ಸಿ.ಸಿ ಸದಸ್ಯ ಚಕ್ಕೇರ ವಾಸು ಕುಟ್ಟಪ್ಪ, ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಆರ್.ಎಂ.ಸಿ. ಮಾಜಿ ಸದಸ್ಯ ಐಪುಮಾಡ ರೋನಿ ಅವರು ಸಭೆಯಲ್ಲಿ ನದಿ ತಿರುವು ಯೋಜನೆ ಬಗ್ಗೆ ಪ್ರಸ್ತಾಪಿಸಿದರು.

ಸ್ಥಳೀಯರಿಗೆ ಈ ನದಿ ತಿರುವು ಯೋಜನೆಯಿಂದ ಅನುಕೂಲ ವಾಗಬೇಕು. ಇಲ್ಲಿ ಹರಿಯುವ ನೀರನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಪರಿಸರ ಹಾನಿ ಮಾಡಿ ಇಲ್ಲಿನ ನೆಲ ಮುಳುಗಿಸಿ, ಜನಪ್ರತಿನಿಧಿಗಳು ಹಾಗೂ ಜನರಿಗೆ ಯಾವದೇ ಮಾಹಿತಿ ಇಲ್ಲದೆ ಹುಣಸೂರು ಶಾಸಕರು ಜಿಲ್ಲೆಯ ಯೋಜನೆ ಬಗ್ಗೆ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಈ ಯೋಜನೆ ರೂಪಿಸುವದಾದರೆ ಉಗ್ರ ತರದ ಹೋರಾಟ ನಡೆಸಲಾಗುವದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಯವರು ಸ್ಥಳೀಯ ಅಧಿಕಾರಿಗಳನ್ನು ಯೋಜನೆ ಬಗ್ಗೆ ಮಾಹಿತಿ ಕೇಳಿದರು. ಈ ಯೋಜನೆ ಬಗ್ಗೆ ಸ್ವತ: ತಮಗೆ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿಯವರು ಹೇಳಿದರು.

ಕಾಫಿ ಬೆಳೆಗಾರರು ಹಾಗೂ ರೈತರು ನದಿ ತೋಡು ನೀರುಗಳನ್ನು ನೀರಾವರಿಗೆ ಬಳಸಲಿ ತಡೆ ಮಾಡುವ ಬಗ್ಗೆ ಆತಂಕದಲ್ಲಿರುವದನ್ನು ತಾ.ಪಂ. ಮಾಜಿ ಸದಸ್ಯ ಬೊಟ್ಟಂಗಡ ರಾಜು ಪ್ರಸ್ತಾಪಿಸಿ ನದಿಯಲ್ಲಿ ಹರಿಯುವ ನೀರನ್ನು ತೋಟಗಳಿಗೆ ಬಳಸುವದರಿಂದ ಪರಿಸರದ ಹಸಿರನ್ನು ಹಾಗೂ ಮರಗಿಡಗಳ ಚಿಗುರು ಬರುತ್ತದೆ. ಒಂದು ಕಡೆ ಬೆಳೆ ರಕ್ಷಣೆಯಾದರೆ, ಇನ್ನೊಂದು ಕಡೆ ಪರಿಸರ ರಕ್ಷಣೆಯಾಗಿ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಪರಿಸರ ಹಸಿರಾಗಿರುವದರಿಂದ ಮೋಡ ಉತ್ಪತ್ತಿಯಾಗಿ ಮಳೆ ಬರುತ್ತದೆ. ಇದರಿಂದ ಪ್ರಾಣಿ, ಪಕ್ಷಿ, ಜೀವಸಂಕುಲ ರಕ್ಷಣೆಯಾಗುತ್ತದೆ. ಇದಕ್ಕೆ ತಡೆ ಮಾಡಿದರೆ ಸಣ್ಣ ರೈತರು ತೀವ್ರ ಸಂಕಷ್ಟ ಎದುರಿಸುವದಂತಾಗುತ್ತದೆ ಎಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು. ಆರ್.ಟಿ.ಸಿ.ಯಲ್ಲಿ ಶಾಶ್ವತ ಬೆಳೆ ಕಾಲಂ ನಮೂದಿಸಲು ಮನವಿ ಮಾಡಿದರು.

ಚಕ್ಕೇರ ಸಿ. ಮಾದಯ್ಯ ಮಾತನಾಡಿ, ರೈತರ ಭತ್ತದ ಹುಲ್ಲನ್ನು ಮಾರಾಟ ಮಾಡಲು ತಡೆ ಮಾಡಿರುವ ಬಗ್ಗೆ ಪ್ರಸ್ತಾಪಪಿಸಿದರು. ರೈತರಿಂದ ಭತ್ತದ ಹುಲ್ಲನ್ನು ಜಾನುವಾರುಗಳಿಗಾಗಿ ಮೇವು ಒದಗಿಸುವ ಸಲುವಾಗಿ ಪಶುಸಂಗೋಪನೆ ಇಲಾಖೆ ಮೂಲಕ ಸರಕಾರ ಖರೀದಿಸುತ್ತದೆ. ಆದ್ದರಿಂದ ರೈತರು ಹುಲ್ಲು ಮಾರಾಟ ಮಾಡಲು ಯಾವದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ವಾಸು ಕುಟ್ಟಪ್ಪ ಮಾತನಾಡಿ, ಪೊನ್ನಂಪೇಟೆಯಿಂದ ಹುದಿಕೇರಿಗೆ ರಸ್ತೆ ಬದಿಯಲ್ಲಿ ತಡೆರಹಿತ ವಿದ್ಯುತ್ ಮಾರ್ಗ ಯೋಜನೆ ಪೂರ್ಣಗೊಂಡರೂ ಸೇವೆಗೆ ಲಭ್ಯವಾಗಿಲ್ಲದ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ಚೆಸ್ಕಾಂ ಹಾಗೂ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಒಂದು ತಿಂಗಳ ಒಳಗೆ ಸೇವೆ ಆರಂಭಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.

ಬುಟ್ಟಿಯಂಡ ನಾಣಯ್ಯ ಮಾತನಾಡಿ, ಬಿರುನಾಣಿ ಜಿಲ್ಲಾ ಕೇಂದ್ರದಿಂದ 100 ಕಿ.ಮೀ ದೂರದಲ್ಲಿದ್ದು, ನೆಮ್ಮದಿ ಕೇಂದ್ರಗಳಲ್ಲಿ ಆರ್.ಟಿ.ಸಿ.ಗಳು ದೊರೆಯುತ್ತಿಲ್ಲ, ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಇದೆ, ಪರಿಹರಿಸಿ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬರಪರಿಹಾರದ ಅನುದಾನ ಇಟ್ಟುಕೊಂಡು ಪ್ರಯೋಜನವಿಲ್ಲ. ಇದನ್ನು ಗ್ರಾ.ಪಂ. ಖಾತೆಗೆ ಕೊಡಿ ಎಂದು ಕೇಳಿದರು.

ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ಮಮತಾ ಪೊನ್ನಪ್ಪ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಎಸ್.ಟಿ,ಎಸ್.ಸಿ ಕಾಲೋನಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮೀಣ ರಸ್ತೆ ತೀವ್ರ ದುಸ್ಥಿತಿಯಲ್ಲಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಜಿಲ್ಲೆಯ ಮೂರು ತಾಲೂಕು ಬರಪೀಡಿತವಾಗಿದೆ. ಈ ಬಗ್ಗೆ ಪ್ರತಿವಾರವೂ ಸಭೆ ನಡೆಸಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಜಿ.ಪಂ.ಗೆ ಕುಡಿಯುವ ನೀರಿಗಾಗಿ 60 ಲಕ್ಷ, ಜಿಲ್ಲಾಧಿಕಾರಿ ಮೂಲಕ 1 ಕೋಟಿ ಕ್ರೀಯಾಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಕಂದಾಯ ಇಲಾಖಾ ಅಧಿಕಾರಿ-ನೌಕರರಿಗೆ ಸಮವಸ್ತ್ರ ಮಾಡಿ

ತಹಶೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರಿಗೆ ಸಮವಸ್ತ್ರ ಮಾಡಿ. ಪೊಲೀಸ್, ಅರಣ್ಯ, ಆರೋಗ್ಯ ಇತ್ಯಾದಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುವವರಿಗೆ ಸಮವಸ್ತ್ರವಿದೆ. ಕಂದಾಯ ಇಲಾಖೆಯವರಿಗೂ ಮಾಡಿ ಎಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ ಹಾಗೂ ಗ್ರಾ.ಪಂ. ಸದಸ್ಯ ಕಾಯಪಂಡ ಸುನಿಲ್ ಹೇಳಿದರು.

ತಹಶೀಲ್ದಾರ್ ಕಚೇರಿ ಹಾಗೂ ಸರ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿ ಹಾಗೂ ನೌಕರರಿಗೆ ಚಹ, ಕಾಫಿ ಸೇವನೆ ಸಮಯ ಹಾಗೂ ಊಟದ ಸಮಯವನ್ನು ಸಹ ನಿಗದಿಪಡಿಸಿ. ಕಚೇರಿಗೆ ತೆರಳಿದಾಗ ಕಾಫಿಗೆ ಹೋಗಿದ್ದಾರೆ, ಊಟಕ್ಕೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಇದರಿಂದ ದಿನನಿತ್ಯ ಜನರು ಅಳೆದಾಡುವಂತಾಗಿದೆ. ಇದರಿಂದ ಜನರ ಕೆಲಸವೂ ಆಗುತ್ತಿಲ್ಲ. ಬಹುತೇಕ ಸಿಬ್ಬಂದಿಗಳು ಕಾಫಿ ಅಂಗಡಿ, ಹೊಟೇಲು, ಮಧ್ಯದ ಅಂಗಡಿಗಳಲ್ಲಿ ಇರುತ್ತಾರೆ. ಸಮವಸ್ತ್ರ ಮಾಡಿದರೆ ಇವರೆಲ್ಲಾ ಕಂದಾಯ ಇಲಾಖೆ ಯವರು ತಮ್ಮ ಕರ್ತವ್ಯ ಬಿಟ್ಟು ಹೊಟೇಲ್, ಮದ್ಯದಂಗಡಿ, ಕಾಫಿ ಅಂಗಡಿಗಳಲ್ಲಿರುವದು ಹಾಗೂ ಮದ್ಯಾಹ್ನದ ಮೇಲೆ ಕಚೇರಿಗೆ ಬಾರದೆ ಮಧ್ಯವರ್ತಿಗಳ ಜೊತೆ ಡೀಲಿಂಗ್‍ನಲ್ಲಿ ತೊಡಗಿರುವದು ಜನರಿಗೆ ಗೋಚರಿಸುತ್ತದೆ ಎಂದು ಹೇಳಿದರು.

ಇದಕ್ಕೆ ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಸಹ ದ್ವನಿಗೂಡಿಸಿ ತಾಲೂಕು ಕಚೇರಿಯಲ್ಲಿ ಯಾವದೇ ಕೆಲಸವಾಗುತ್ತಿಲ್ಲ. ಎಲ್ಲಾ ಕೆಲಸಕ್ಕೂ ನಾಳೆ ಬನ್ನಿ ಇವತ್ತು ಆಗುವದಿಲ್ಲ ಎನ್ನುವ ಉತ್ತರ ಕೊಡುತ್ತಾರೆ. ಈ ಅಶಿಸ್ತನ್ನು ಸರಿಪಡಿಸಿ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಸಮವಸ್ತ್ರ ಮಾಡುವದು ತಮ್ಮ ಪರಿಮಿತಿಯಲ್ಲಿಲ್ಲ. ಆದರೆ ಎಲ್ಲರಿಗೂ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸುವಂತೆ ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದರ ಕಡ್ಡಾಯ ಅನುಷ್ಠಾನ ಮಾಡಲಾಗುವದು. ಆದರೆ ಊಟದ ಸಮಯ ಮದ್ಯಾಹ್ನ 1.30 ರಿಂದ 2.30 ಆಗಿರುತ್ತದೆ. ಇದರ ಬಗ್ಗೆ ಪರಿಶೀಲನೆಗೆ ದೀಡೀರ್ ಆಗಿ ಕಚೇರಿಗಳಿಗೆ ಭೇಟಿ ನೀಡಲಾಗುವದು ಎಂದು ಅವರು ಹೇಳಿದರು.

ಧ್ವನಿ ವರ್ದಕ ತೆರವು ಮಾಡಿ: ಬಹಳಷ್ಟು ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳ ಸಮೀಪ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿ ವರ್ಧಕ ಬಳಸುತ್ತಿರುವದರಿಂದ ವಿದ್ಯಾರ್ಥಿಗಳ ಪಾಠ, ಪ್ರವಚನ, ಏಕಾಗೃತೆ ಹಾಗೆಯೇ ಆಸ್ಪತ್ರೆಗಳಲ್ಲಿ ರೋಗಿಗಳಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಇಂತಹ ಧ್ವನಿ ವರ್ಧಕಗಳನ್ನು ನಿಷೇಧಿಸುವಂತೆ ಬಿರುನಾಣಿ ಗ್ರಾ.ಪಂ. ಸದಸ್ಯ ಕಾಯಪಂಡ ಸುನಿಲ್ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಈ ಬಗ್ಗೆ ಸುಪ್ರಿಂ ಕೋರ್ಟ್ ಧ್ವನಿ ವರ್ಧಕ ನಿರ್ಬಂಧಿಸಲು ಆದೇಶ ನೀಡಿ ತೀರ್ಪು ನೀಡಿದೆ. ಇದನ್ನು ಅನುಷ್ಠಾನಗೊಳಿಸಬೇಕು. ತಾವು ಯಾವದೇ ಒಂದು ಧರ್ಮ, ಜಾತಿ ಬಗ್ಗೆ ವಿರೋಧವಾಗಿ ಈ ವಿಚಾರ ಪ್ರಸ್ತಾಪಿಸುತ್ತಿಲ್ಲ. ಬದಲಿಗೆ ವಿದ್ಯಾರ್ಥಿ ಗಳು ಹಾಗೂ ರೋಗಿಗಳ ಹಿತಾಸಕ್ತಿ ಯಿಂದ ಈ ವಿಚಾರ ಪ್ರಸ್ತಾಪ ಮಾಡುತ್ತಿರುವದಾಗಿ ಅವರು ಹೇಳಿದರು. ಜಿಲ್ಲೆಗೆ ಬಹಳಷ್ಟು ವಲಸಿಗರು ತಮ್ಮ ಮೂಲ ಸ್ಥಳದಲ್ಲಿ ಎಲ್ಲಾ ಸೌಲಭ್ಯ ಹೊಂದಿದ್ದು, ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದಾರೆ. ಆದರೆ ಜಿಲ್ಲೆಯಲ್ಲಿ ಇಂತವರು ತಮ್ಮ ಸುಸ್ಥಿತಿಯನ್ನು ಬಚ್ಚಿಟ್ಟು, ಸರಕಾರದ ನಿವೇಶನ ಸೇರಿದಂತೆ ವಿವಿಧ ಯೋಜನೆಗಳ ಪಲಾನುಭವಿ ಗಳಾಗುತ್ತಿದ್ದಾರೆ. ಇದರಿಂದ ಜಿಲ್ಲೆಯ ನಿಜವಾದ ಮೂಲನಿವಾಸಿಗಳಿಗೆ ಸರಕಾರದ ಸೌಲಭ್ಯದಿಂದ ವಂಚಿತ ರಾಗಿದ್ದಾರೆ ಎಂದು ಗಮನ ಸೆಳೆದರು.

ಆನೆ ಮಾನವ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯದಂಚಿನ ಸ್ಥಳಗಳಲ್ಲಿ ಸೋಲಾರ್ ಬೇಲಿ ಹಾಕುವ ಕೆಲಸ ನೆಡೆಯುತ್ತಿದ್ದು, ಹೀಗಾಗಲೇ ಸರಕಾರಕ್ಕೆ ಸುಮಾರು 52 ಕೋಟಿ ಅನುದಾನವನ್ನು ನೀಡುವಂತೆ ಕೋರಲಾಗಿದೆ. ನದಿ ತೋಡುಗಳಿಗೆ ರೈಲ್ವೆ ಕಂಬಿಗಳನ್ನು ಅಳವಡಿಸ ಲಾಗುವದು. ಕೆಲವೊಂದು ಸ್ಥಳಗಳಲ್ಲಿ ಸ್ಥಳೀಯ ಜನರು ಕಂದಕ ನಿರ್ಮಾಣಕ್ಕೆ ಸ್ಪಂದನೆಯನ್ನು ನೀಡಬೇಕಾಗಿದೆ. ಈಗಾಗಲೇ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡು ಪ್ರಾಣಿಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಕ್ರಮ ಒಂದೇ ಆವೃತ್ತಿಯಲ್ಲಿ ನಡೆಸಲಾಗು ವದು. ಹೀಗಾದರೆ ಮಾತ್ರ ಆನೆ ಮಾನವ ಸಂಘರ್ಷವನ್ನು ಮತ್ತು ಕಾಡು ಪ್ರಾಣಿಗಳ ಉಪಟಳವನ್ನು ತಡೆಯಲು ಸಾಧ್ಯ ಎಂದು ಡಿ.ಸಿ.ಎಪ್. ಸೂರ್ಯಸೇನ್ ಸಭೆಗೆ ತಿಳಿಸಿದರು.

ಅಕ್ರಮ ಮರಳುಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೆ ವೀರಾಜಪೇಟೆ ತಾಲೂಕಿನಲ್ಲಿ ಮರಳು ತೆಗೆಯುವ ಸ್ಥಳವನ್ನು ಗುರುತಿಸ ಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲಾಗುವದು. ಆದರೆ ಸ್ವಂತ ಮನೆ ನಿರ್ಮಾಣಕ್ಕೆ ಬೇಕಾದ ಮರಳನ್ನು ಬಳಸಲು ಅವಕಾಶವಿದೆ. ತಾಲೂಕಿನ ಪರಿಮಿತಿಯನ್ನು ಬಿಟ್ಟು ಬೇರೆ ಸ್ಥಳಕ್ಕೆ ಮರಳು ಸಾಗಿಸುವದನ್ನು ನಿರ್ಬಂಧಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿಯನ್ನು ನೀಡಿದರು

ಈ ಸಂದರ್ಭ ವೇದಿಕೆಯಲ್ಲಿ ತಹಶೀಲ್ದಾರ್ ಮಹದೇವಸ್ವಾಮಿ, ಈ.ಒ.ಕಿರಣ್ ಪಡ್ನೇಕರ್, ಕುಟ್ಟ ಸಿ.ಐ.ದಿವಾಕರ್. ಡಿ.ಸಿ.ಎಪ್ ಸೂರ್ಯ, ಹುದಿಕೇರಿ ಆರ್.ಐ ರಾಧಕೃಷ್ಣ ಹಾಜರಿದ್ದರು.