ಸೋಮವಾರಪೇಟೆ, ಅ.20: ಕಳೆದ 7 ವರ್ಷಗಳ ಹಿಂದೆಯೇ ಪ್ರಾರಂಭಗೊಂಡು ಇದುವರೆಗೂ ಕುಂಟುತ್ತಾ ಸಾಗಿ ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ಇಲ್ಲಿನ ಅಂಬೇಡ್ಕರ್ ಭವನ ಕಾಮಗಾರಿ ಇದೀಗ ಪ್ರಾರಂಭಗೊಂಡಿದೆ.

ಅನುದಾನ ಕೊರತೆಯ ನೆಪವೊಡ್ಡಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಹಿನ್ನೆಲೆ ಕೆಲ ವರ್ಷಗಳಿಂದ ಕಾಮಗಾರಿ ನಿಂತ ನೀರಾಗಿತ್ತು. ಈ ಬಗ್ಗೆ ‘ಶಕ್ತಿ’ಯಲ್ಲಿ ವಿಸ್ತøತ ವರದಿ ಪ್ರಕಟಗೊಂಡ ನಂತರ ಎಚ್ಚೆತ್ತಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಅಭಿಯಂತರರು ಕಾಮಗಾರಿ ಪ್ರಾರಂಭಕ್ಕೆ ಮನಸ್ಸು ಮಾಡಿದ್ದು, ಇದೀಗ ಭವನಕ್ಕೆ ರೋಲಿಂಗ್ ಷಟರ್ಸ್ ಅಳವಡಿಸಿ ಮೆಟ್ಟಿಲು ನಿರ್ಮಾಣ ಸೇರಿದಂತೆ ಇತರ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ.

ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಒಳಭಾಗ ಪಾಳುಬಿದ್ದಂತಾಗಿ ಪುಂಡಪೋಕರಿಗಳ ಸ್ಥಾನವಾಗಿತ್ತು. ಈ ಕಟ್ಟಡದೊಳಗೆ ಕಾನೂನುಬಾಹಿರ ಚಟುವಟಿಕೆಗಳೂ ನಡೆಯುತ್ತಿದ್ದವು. ಭವನದ ಹಿಂಭಾಗ ಕಾಡುಪೊದೆಗಳು ಬೆಳೆದು ಇಡೀ ವಾತಾವರಣ ಗಬ್ಬೆದ್ದು ನಾರುತ್ತಿತ್ತು.

ಇದೀಗ ಭವನದ ಸುತ್ತಲೂ ಕಾಡು ಗಿಡಗಂಟಿಗಳನ್ನು ಕಡಿದು ಶುಚಿಗೊಳಿಸಲಾಗಿದ್ದು, ಕಾರ್ಮಿಕರು ಮೆಟ್ಟಿಲು ಸೇರಿದಂತೆ ಇತರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ನಿಂತನೀರಾಗಿದ್ದ ಕಾಮಗಾರಿಗೆ ಇದೀಗ ಮರುಜೀವ ಬಂದಿದೆ.

ಭವನ ಉದ್ದೇಶಿತ ರೀತಿಯಲ್ಲಿ ಪೂರ್ಣಗೊಳ್ಳಲು ಹೆಚ್ಚಿನ ಅನುದಾನ ಬೇಕಿದ್ದು, ಈ ಹಿನ್ನೆಲೆ ತಾಲೂಕು ಮಟ್ಟದ ಅಂಬೇಡ್ಕರ್ ಭವನವನ್ನಾಗಿ ಪರಿಗಣಿಸಿ ರೂ. 1.50 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಗೊಂಡ ತಕ್ಷಣ ಭವನವನ್ನು ಉದ್ದೇಶಿತ ರೀತಿಯಲ್ಲಿಯೇ ಪೂರ್ಣಗೊಳಿಸಲಾಗುವದು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ ಅವರು ತಿಳಿಸಿದ್ದಾರೆ.