ಸೋಮವಾರಪೇಟೆ, ಅ. 9: ಕಳೆದ ಹಲವು ತಿಂಗಳ ಕಾಲ ನೆಮ್ಮದಿಯಲ್ಲಿದ್ದ ಸೋಮವಾರಪೇಟೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಇದೀಗ ಕಳ್ಳರ ಹಾವಳಿ ಹೆಚ್ಚಾಗಿದೆ. ದೇವಾಲಯಗಳು, ಅಂಗಡಿಗಳೇ ಕಳ್ಳರ ಮೊದಲ ಟಾರ್ಗೆಟ್ ಆಗಿದ್ದು, ಕಳ್ಳತನದ ಸರಣಿ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ಸುಧಾರಿತ ಕ್ರಮಗಳನ್ನು ಕೈಗೊಳ್ಳದೇ ಕೈಕಟ್ಟಿ ಕುಳಿತಿದೆ.
ಕಳೆದ ವಾರವಷ್ಟೇ ಇಲ್ಲಿನ ಆಂಜನೇಯ ದೇವಾಲಯದ ಬಳಿ ಇರುವ ಖಾಸಗಿ ಶಾಲೆಯ ಕೊಠಡಿ ಬಾಗಿಲು ಒಡೆದು ಒಳ ನುಗ್ಗಿರುವ ಕೈಯಲ್ಲಿ ಬರಿಗೈಯಲ್ಲಿ ವಾಪಸ್ಸಾಗಿದ್ದು, ಕಕ್ಕೆಹೊಳೆ ಸಮೀಪದ ದೇವಾಲಯದ ಹುಂಡಿ ಕಳವಿಗೂ ಯತ್ನಿಸಿದ್ದರು.
ಈ ಘಟನೆಗಳು ಮಾಸುವ ಮುನ್ನನೇ ನಿನ್ನೆ ರಾತ್ರಿ ಜೂನಿಯರ್ ಕಾಲೇಜು ಬಳಿಯಿರುವ ಮಂಜುನಾಥ್ ಅವರಿಗೆ ಸೇರಿದ ಕ್ಯಾಂಟೀನ್ನ ಬಾಗಿಲು ಮುರಿದಿರುವ ಕಳ್ಳರು, ಒಳಗಿದ್ದ 1 ಸಾವಿರ ನಗದು ಸೇರಿದಂತೆ ಹೀರೋ ಹೋಂಡಾ ಬೈಕನ್ನು ಕದ್ದು ಪರಾರಿಯಾಗಿದ್ದಾರೆ. ಇದೇ ಕ್ಯಾಂಟೀನ್ನ ಹಿಂಬದಿಯ ಬಾಗಿಲನ್ನೂ ಒಡೆದು ಒಳಗಿದ್ದ ತಿಂಡಿ ಡಬ್ಬಗಳನ್ನು ಹೊರಗೆಸೆದು ಬೈಕ್ ಹಾಗೂ ಹಣದೊಂದಿಗೆ ಕಾಲ್ಕಿತ್ತಿದ್ದಾರೆ.
ಇದಾದ ನಂತರ ಕಳ್ಳರ ತಂಡ ಐಗೂರು ಗ್ರಾಮದ ಗುಳಿಗಪ್ಪ ದೇವಾಲಯದ ಹುಂಡಿ ಹೊಡೆಯಲು ಯತ್ನಿಸಿದ್ದು, ಸ್ಥಳೀಯರು ಬೊಬ್ಬೆ ಹಾಕಿದ ಸಂದರ್ಭ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಮಡಿಕೇರಿ ಮಾರ್ಗದ ಕಡೆ ಕಳ್ಳರು ತೆರಳಿದ ಮಾಹಿತಿ ಪಡೆದ ಸ್ಥಳೀಯರು ಕುಂಬೂರಿನ ಕೆಲವರಿಗೆ ಮೊಬೈಲ್ ಕರೆಮಾಡಿ ವಿಷಯ ತಿಳಿಸಿದ್ದಾರೆ.
ರಾತ್ರಿ 2.30ರ ಸುಮಾರಿಗೆ ಕುಂಬೂರಿನತ್ತ ಬರುತ್ತಿದ್ದ ಬೈಕ್ನ್ನು ಸ್ಥಳೀಯ ನಿವಾಸಿ ಸೋಮಪ್ಪ ಅವರು ಅಡ್ಡಗಟ್ಟಿ ಬೈಕ್ ಸಹಿತ ಕಳ್ಳನನ್ನು ಹಿಡಿದಿದ್ದಾರೆ. ಈ ಸಂದರ್ಭ ಮೂತ್ರ ವಿಸರ್ಜಿಸುವ ನೆಪದಲ್ಲಿ ಕಳ್ಳ ಕತ್ತಲಲ್ಲಿ ಕಣ್ಮರೆಯಾಗಿದ್ದಾನೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು, ಕಳ್ಳ ಬಿಟ್ಟುಹೋದ ಬೈಕ್, ಸೋಮವಾರಪೇಟೆಯ ಕ್ಯಾಂಟೀನ್ನಿಂದ ಕಳುವಾದ ಬೈಕ್ ಎಂದು ತಿಳಿದುಬಂದಿದೆ.
ಒಟ್ಟಾರೆ ಕಳೆದ ಕೆಲ ಸಮಯಗಳಿಂದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬಾಗಿಲ ಬೀಗವನ್ನು ಕಬ್ಬಿಣದ ಸಲಾಕೆಯಿಂದ ಒಡೆದು ಒಳನುಗ್ಗುವ ಕಳ್ಳರು ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಕಾರ್ಯಾಚರಿಸುತ್ತಿದ್ದಾರೆ. ದೇವಾಲಯಗಳ ಕಾಣಿಕೆ ಹುಂಡಿಯೇ ಇವರ ಟಾರ್ಗೆಟ್ ಆಗಿದ್ದು, ಕಳೆದೆರಡು ತಿಂಗಳ ಹಿಂದಷ್ಟೇ ಬಜೆಗುಂಡಿಯ ಅಯ್ಯಪ್ಪ ದೇವಾಲಯದ ಹುಂಡಿ ಕಳ್ಳತನ ಮಾಡಿದ್ದ ಕಳ್ಳರ ತಂಡದ ಓರ್ವನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಸೋಮವಾರಪೇಟೆಯ ಸಾರ್ವಜನಿಕರ ನೆಮ್ಮದಿ ಕೆಡಿಸಿರುವ ಕಳ್ಳರನ್ನು ತಕ್ಷಣ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆಯಲ್ಲಿ ಪೊಲೀಸ್ ಬೀಟ್ ಹೆಚ್ಚಿಸಬೇಕು ಎಂದು ಈವ್ಯಾಪ್ತಿಯ ಸಾರ್ವಜನಿಕರು ಪತ್ರಿಕೆಯೊಂದಿಗೆ ಆಗ್ರಹಿಸಿದ್ದಾರೆ.