ಸೋಮವಾರಪೇಟೆ, ಅ. 19: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಪ.ಪಂ. ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ರೂ. 14.86 ಕೋಟಿ ಅನುದಾನ ಒದಗಿಸಬೇಕೆಂದು ರಾಜ್ಯ ಸರ್ಕಾರದ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಪ.ಪಂ. ವತಿಯಿಂದ ಮನವಿ ಸಲ್ಲಿಸಲಾಯಿತು.

ಇಲ್ಲಿನ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರಿಗೆ ಪಂಚಾಯಿತಿ ವತಿಯಿಂದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರು ಮನವಿ ಸಲ್ಲಿಸಿದರು.

ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ ಜನಸಂಖ್ಯೆ ಕಡಿಮೆಯಿದ್ದು, ಈ ನಿಟ್ಟಿನಲ್ಲಿ ಸುತ್ತಮುತ್ತಲಿನ ಹಾನಗಲ್ಲು, ಬೇಳೂರು ಮತ್ತು ಚೌಡ್ಲು ಗ್ರಾಮ ಪಂಚಾಯಿತಿಗಳ ಕೆಲ ಗ್ರಾಮಗಳನ್ನು ಒಳಗೊಂಡಂತೆ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಈ ಸಂಬಂಧಿತ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದ್ದು, ತುರ್ತು ಗಮನ ಹರಿಸುವಂತೆ ವಿಜಯಲಕ್ಷ್ಮೀ ಮನವಿ ಮಾಡಿದರು.

ಇದರೊಂದಿಗೆ ಪಟ್ಟಣದಲ್ಲಿ ವಾಹನ ನಿಲುಗಡೆ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಇದನ್ನು ಪರಿಹರಿಸಲು ಈಗಿರುವ ಮಾರುಕಟ್ಟೆಯನ್ನು ಮೇಲ್ದರ್ಜೆ ಗೇರಿಸಬೇಕು. ವಾಹನ ನಿಲುಗಡೆಗೆ ಸುಸಜ್ಜಿತ ಪ್ರಾಂಗಣ ನಿರ್ಮಿಸಬೇಕು. ಈ ಹಿನ್ನೆಲೆ ರೂ. 3 ಕೋಟಿ ಅನುದಾನ ಒದಗಿಸಬೇಕೆಂದು ಮನವಿ ಮಾಡಲಾಯಿತು.

ಪ.ಪಂ. ವ್ಯಾಪ್ತಿಯಲ್ಲಿರುವ ನೂತನ ಬಡಾವಣೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ರೂ. 1.50 ಕೋಟಿ, ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ರೂ. 90 ಲಕ್ಷ, ಆನೆಕೆರೆ ಪುನಶ್ಚೇತನಕ್ಕೆ ರೂ. 98 ಲಕ್ಷ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆ, ಚರಂಡಿ ನಿರ್ಮಾಣಕ್ಕೆ ರೂ. 5 ಕೋಟಿ, ಶತಮಾನೋತ್ಸವ ಭವನ ಪೂರ್ಣಗೊಳಿಸಲು ರೂ. 98 ಲಕ್ಷ, ನಗರದಲ್ಲಿ ಮೀನು ಮಾರಾಟ ಕೇಂದ್ರ ಸ್ಥಾಪನೆಗೆ ರೂ. 2.50 ಕೋಟಿ ಸೇರಿದಂತೆ ಒಟ್ಟು ರೂ. 14.86 ಕೋಟಿ ಅನುದಾನ ನೀಡಬೇಕೆಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆಯ ಮೇರೆ ಅನುದಾನ ಬಿಡುಗಡೆಗೊಳಿಸ ಲಾಗುವದು.

ಸರ್ಕಾರದಿಂದ ಈಗಾಗಲೇ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭ ಜಿಲ್ಲಾ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಅಭಿಯಂತರ ಶಿವಪ್ರಕಾಶ್, ಮಡಿಕೇರಿ ನಗರ ಸಭೆ ಆಯುಕ್ತೆ ಪುಷ್ಪಾವತಿ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲ, ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರ ವೀರೇಂದ್ರ, ಪಂಚಾಯಿತಿ ಸದಸ್ಯರುಗಳು, ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.