ಮಡಿಕೇರಿ, ಜೂ. 23 : ಸೋಮವಾರಪೇಟೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಪ್ರಚೋದನಾಕಾರಿ ಗಲಭೆ ಖಂಡನೀಯವೆಂದು ತಿಳಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಅಲ್ಪ ಸಂಖ್ಯಾತರ ಘಟಕ ಅಮಾಯಕರನ್ನು ಬಂಧಿಸಬಾರದೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಅಧ್ಯಕ್ಷ ಕೆ.ಎ.ಯಾಕೂಬ್ ಸೋಮವಾರಪೇಟೆಯಲ್ಲಿ ಬೆರಳೆಣಿಕೆ ಯಷ್ಟು ಮಂದಿ ಕೋಮು ಪ್ರಚೋದನೆ ನೀಡುವ ಮೂಲಕ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ಮೋಹನ್ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಅಲ್ಪಸಂಖ್ಯಾತರ ಘಟಕ ಖಂಡಿಸುತ್ತದೆ. ಆದರೆ ತಪ್ಪಿತಸ್ಥರನ್ನು ಬಂಧಿಸದೆ ಅಮಾಯಕರನ್ನು ಬಂಧಿಸುತ್ತಿರುವ ಪೊಲೀಸರ ಕ್ರಮ ಸರಿಯಲ್ಲವೆಂದರು.

ಬಷೀರ್ ಎಂಬವರು ಘಟನೆ ಸಂದರ್ಭ ಮಸೀದಿಯಲ್ಲಿದ್ದರು. ಆದರೆ ಇವರನ್ನು ಕೂಡ ಬಂಧಿಸಲಾಗಿದೆ ಎಂದು ಆರೋಪಿಸಿದ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಮಾತ್ರ ಬಂಧಿಸಬೇಕೆಂದು ಒತ್ತಾಯಿಸಿ ದರು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಕೆಲವು ಸಂಘಟನೆಗಳ ಕಾರ್ಯಕರ್ತರು ಅಲ್ಪ ಸಂಖ್ಯಾತರ ಅಂಗಡಿಗಳ ಮೇಲೆ ಧಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಅಮಾಯಕರ ಮೇಲೆ ಹಲ್ಲೆ ನಡೆಸುವದು ಸರಿಯಾದ ಕ್ರಮವಲ್ಲ. ಐಗೂರು ವ್ಯಾಪ್ತಿಯಲ್ಲಿ ಅಪರಿಚಿತರು ಬಂದು ವಾಹನಗಳನ್ನು ಜಖಂಗೊಳಿಸಿ ದ್ದಲ್ಲದೆ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರತಿಭಟನೆ ಸಂದರ್ಭ ನಡೆದ ಹಲ್ಲೆಯಲ್ಲಿ ಗಾಯಗೊಂಡವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರಪೇಟೆಯಲ್ಲಿ ಅಲ್ಪಸಂಖ್ಯಾತರು ಭಯ-ಭೀತರಾಗಿದ್ದು, ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವವರನ್ನು ಪೊಲೀಸರು ತಕ್ಷಣ ಬಂಧಿಸಬೇಕೆಂದು ಯಾಕೂಬ್ ಒತ್ತಾಯಿಸಿದರು. ಕ್ಷೇತ್ರದ ಶಾಸಕರು ಹಾಗೂ ಇತರ ರಾಜಕೀಯ ನೇತಾರರು ಯಾವದೇ ಪಕ್ಷದ ಪರವಾಗಿದ್ದರೂ ಇಂತಹ ಸಂದರ್ಭ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಮಧ್ಯಪ್ರವೇಶ ಮಾಡ ಬೇಕೆಂದು ಅವರು ಒತ್ತಾಯಿಸಿದರು. ಬಿಜೆಪಿ ಮತ್ತು ಆರ್‍ಎಸ್‍ಎಸ್‍ನವರು ನಮ್ಮ ಸ್ನೇಹಿತರು, ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡುತ್ತೇವೆ. ಆದರೆ ಬೆರಳೆಣಿಕೆಯ ಮಂದಿ ಸಮಾಜದ ಶಾಂತಿಯನ್ನು ಕದಡುತ್ತಿದ್ದು, ಜನರು ಜಾಗೃತರಾಗ ಬೇಕೆಂದು ಯಾಕೂಬ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ವಿಭಾಗೀಯ ಸಂಯೋಜಕ ಎಂ.ಎ.ಉಸ್ಮಾನ್, ಘಟಕದ ಕಾರ್ಯದರ್ಶಿಗಳಾದ ಮುನೀರ್ ಹಾಗೂ ಖಾಲೀದ್ ಉಪಸ್ಥಿತರಿದ್ದರು.