ಸೋಮವಾರಪೇಟೆ,ಅ.24: ಪಟ್ಟಣದಲ್ಲಿ ಕಾನೂನು ಬಾಹಿರ ಚಟುವಟಿಕೆ, ಕಳ್ಳತನ ನಿಗ್ರಹಕ್ಕೆ ಪಟ್ಟಣದ ಸೂಕ್ತ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಸನ್ನ, ಕರವೇ ಅಧ್ಯಕ್ಷ ದೀಪಕ್, ಕೆ.ಎ.ಆದಂ, ಹೆಚ್.ಎ. ನಾಗರಾಜು ಸೇರಿದಂತೆ ಮತ್ತಿತರರು ಈ ಬಗ್ಗೆ ಡಿವೈಎಸ್ಪಿ ಸಂಪತ್ಕುಮಾರ್ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸ್ಥಳವನ್ನು ಗುರುತಿಸಲಾಗಿದೆ, ದಾನಿಗಳ ಸಹಕಾರವಿದ್ದರೆ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.
ಪಟ್ಟಣದಲ್ಲಿ ಗೋವುಗಳ ಕಳ್ಳತನವಾಗುತ್ತಿದ್ದು, ಪೊಲೀಸರು ಸೂಕ್ರ ಕ್ರಮಕೈಗೊಳ್ಳಬೇಕೆಂದು ಸುಭಾಷ್ ತಿಮ್ಮಯ್ಯ, ಮಸಗೋಡು ಸುರೇಶ್, ಉಮೇಶ್ ಆಗ್ರಹಿಸಿದರು. ಗೋವು ಸಂರಕ್ಷಣೆ ಮಾಡಿಕೊಳ್ಳುವದು ಮಾಲೀಕರ ಕರ್ತವ್ಯ, ಹಾಲು ಕರೆದುಕೊಂಡು, ಹಸುಗಳ ರಕ್ಷಣೆ ಮಾಡದಿದ್ದರೆ ಅವುಗಳನ್ನು ಕದಿಯಲಾಗುತ್ತದೆ. ಈ ಕಾರಣದಿಂದ ಪ್ರತಿಯೊಬ್ಬರಿಗೂ ಜವಾಬ್ದಾರಿಕೆ ಇರಬೇಕು ಎಂದು ಡಿವೈಎಸ್ಪಿ ಹೇಳಿದರು.
ಮಾದಾಪುರದ ಸುತ್ತಮುತ್ತ ಅಕ್ರಮವಾಗಿ ಗಾಂಜಾ ಮಾರಾಟ ನಡೆಯುತ್ತಿದ್ದು,ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಯುವಕರು ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯ ಮಜೀದ್ ದೂರಿದರು.
ತಾಲೂಕಿನ ಬಹುತೇಕ ಕಾಫಿ ತೋಟಗಳಲ್ಲಿ ಅಸ್ಸಾಮಿಗರ ಸೋಗಿನಲ್ಲಿರುವ ಬಾಂಗ್ಲಾ ದೇಶಿಯರು ವಾಸಮಾಡುತ್ತಿದ್ದಾರೆ. ಅವರಿಗೆ ಕೇವಲ 200 ರೂ.ಗಳಲ್ಲಿ ಆಧಾರ್ಕಾರ್ಡ್ ಮಾಡಿಕೊಡುವ ದಂಧೆ ನಡೆಯುತ್ತಿದೆ ಎಂದು ಕರವೇ ಅಧ್ಯಕ್ಷ ದೀಪಕ್, ಸೋಮಪ್ಪ, ಸೋಮೇಶ್ ಆರೋಪಿಸಿದರು. ಕಾಫಿ ಬೆಳೆಗಾರರ ಸಂಘದವರನ್ನು ಸಂಪರ್ಕಿಸಿ, ಕಾರ್ಮಿಕರ ಪೂರ್ಣ ವಿಳಾಸ ಹಾಗೂ ಭಾವಚಿತ್ರವನ್ನು ಠಾಣೆಗೆ ಕೊಡುವಂತೆ ಸೂಚನೆ ನೀಡಲಾಗುವದು ಎಂದು ಅಧಿಕಾರಿ ಭರವಸೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಪೊಲೀಸ್ ಅಧಿಕಾರಿಗಳು ಜನಸಂಪರ್ಕ ಸಭೆ ನಡೆಸಲು ಕ್ರಮಕೈಗೊಳ್ಳಬೇಕೆಂದು ಬಸಪ್ಪ ಮನವಿ ಮಾಡಿದರು.
ಟಿಪ್ಪು ಜಯಂತಿ ಚರ್ಚೆಗೆ ವಿರೋಧ: ಜನಸಂಪರ್ಕ ಸಭೆ ಪ್ರಾರಂಭವಾಗುತ್ತಿದಂತೆ ಡಿವೈಎಸ್ಪಿ ಸಂಪತ್ ಕುಮಾರ್ ಅವರು ಟಿಪ್ಪು ಜಯಂತಿ ಆಚರಣೆ ಬಗ್ಗೆ ಮಾತನಾಡುತ್ತ, ಸರ್ಕಾರದ ಕಾರ್ಯಕ್ರಮವಾದ ಟಿಪ್ಪು ಜಯಂತಿಯನ್ನು ಆಚರಿಸಬೇಕಾಗಿದ್ದು, ಈ ಬಗ್ಗೆ ಚರ್ಚೆ ಮಾಡಬಹುದು ಎಂದರು.
ಜೆಡಿಎಸ್ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ ಮಾತನಾಡಿ, ಕಳೆದ ವರ್ಷ ಟಿಪ್ಪು ಜಯಂತಿ ಆಚರಿಸುವ ಸಂದರ್ಭ ಅನೇಕರ ಮೇಲೆ ಹಲ್ಲೆ ನಡೆದಿದೆ. ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುವವರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕೆಂದು ಅಗ್ರಹಿಸಿದರು.
ಟಿಪ್ಪು ಜಯಂತಿ ವಿರೋಧಿ ಸಮಿತಿ ಜಿಲ್ಲಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ಹಿಂದೂಪರ ಸಂಘಟನೆಯ ಮಸಗೋಡು ಸುರೇಶ್ ಸೇರಿದಂತೆ ಇತರರು ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಟಿಪ್ಪು ಜಯಂತಿಯ ಬಗೆಗಿನ ಚರ್ಚೆ ಬೇಡ. ಅದಕ್ಕಾಗಿ ಬೇರೆ ಸಭೆಯನ್ನು ಕರೆದರೆ ನಾವು ಸಿದ್ದರಾಗಿ ಬರುತ್ತೇವೆ ಎಂದು ಹೇಳಿದರು. ಟಿಪ್ಪು ಜಯಂತಿಯ ಬಗೆಗಿನ ಚರ್ಚೆ ಬೇಡವೆಂದು ಬಹುತೇಕ ಮಂದಿ ಹೇಳಿದ ಹಿನ್ನೆಲೆ ಡಿವೈಎಸ್ಪಿ ಒಪ್ಪಿದರು. ನಂತರ ಪಟ್ಟಣದಲ್ಲಿ ಏಕಮುಖ ಸಂಚಾರ, ವಾಹನ ನಿಲುಗಡೆ, ದ್ವಿಚಕ್ರ ವಾಹನದಲ್ಲಿ ಮೂವರು ಸವಾರರು ಸಂಚರಿಸುತ್ತಿರುವ ಬಗ್ಗೆ ರವೀಶ್ ಅಧಿಕಾರಿಗಳ ಗಮನಕ್ಕೆ ತಂದರು. ಒಟ್ಟಿನಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ವ್ಯವಸ್ಥೆ ನಿಷ್ಕ್ರಿಯಗೊಂಡಿದೆ ಎಂದು ಆರೋಪಿಸಿದರು.
ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆಗೆ ದೂರು ನೀಡಿದರೆಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆ ಪೊಲೀಸರೇ ಧಾಳಿ ನಡೆಸಬೇಕು ಎಂದು ಶಾಂತಳ್ಳಿಯ ಸುರೇಶ್, ಪ್ರತಾಪ್ ಸೇರಿದಂತೆ ಇತರರು ಆಗ್ರಹಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಮಹೇಶ್ ತಿಮ್ಮಯ್ಯ, ಮುಕ್ರಂ ಬೇಗ್ ಬಾಬು, ಟಿ.ಕೆ. ರಮೇಶ್, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು. ಠಾಣಾಧಿಕಾರಿ ಶಿವಣ್ಣ ಉಪಸ್ಥಿತರಿದ್ದರು.