ಸೋಮವಾರಪೇಟೆ, ಅ. 17: ತಲಕಾವೇರಿಯಲ್ಲಿ ತೀರ್ಥರೂಪಿಣಿ ಯಾಗಿ ಆವೀರ್ಭವಿಸಿದ ಪವಿತ್ರ ಕಾವೇರಿ ತೀರ್ಥವನ್ನು ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಸಾರ್ವಜನಿಕರಿಗೆ ವಿತರಿಸಿದರು.
ನಿನ್ನೆ ರಾತ್ರಿಯೇ ತಲಕಾವೇರಿಗೆ ತೆರಳಿದ್ದ ಸಂಘದ ಪದಾಧಿಕಾರಿಗಳು ಇಂದು ಬೆಳಗ್ಗೆಯೇ ತೀರ್ಥ ತಂದು ಸೋಮವಾರಪೇಟೆಯ ಕಾವೇರಿ ವೃತ್ತದಲ್ಲಿ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕರಿಗೆ ತೀರ್ಥ ತುಂಬಿದ ಬಾಟಲಿಗಳನ್ನು ವಿತರಿಸಿದರು.
ನಗರದ ವಿವಿಧ ಭಾಗಗಳಲ್ಲಿ ತೆರೆದ ವಾಹನದಲ್ಲಿ ಸಂಚರಿಸಿದ ಪದಾಧಿಕಾರಿಗಳು, ಸಾರ್ವಜನಿಕರ ಮನೆ ಬಾಗಿಲಿಗೆ ಪವಿತ್ರ ತೀರ್ಥವನ್ನು ತಲಪಿಸಿದರು. ಪವಿತ್ರ ಕಾವೇರಿ ತೀರ್ಥ ವನ್ನು ಪಡೆಯಲು ಸಾರ್ವಜನಿಕರು ಮುಗಿಬಿದ್ದರು.
ಕಾವೇರಿ ವೃತ್ತದ ಬಳಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ, ನಾಡಿನ ಜೀವನದಿಯಾಗಿರುವ ಕಾವೇರಿಯನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ಪ್ರತಿಯೋರ್ವರೂ ಕಾರ್ಯೋನ್ಮುಖ ರಾಗಬೇಕೆಂದು ಕರೆ ನೀಡಿದರು.
ಕಾವೇರಿ ನದಿ ಪಾತ್ರದಲ್ಲಿ ಕಲುಷಿತ ನೀರು, ತ್ಯಾಜ್ಯಗಳನ್ನು ನದಿಗೆ ಬಿಡಲಾಗುತ್ತಿದ್ದು, ಇದರಿಂದಾಗಿ ಪವಿತ್ರ ನದಿ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಜೀವನದಿಯನ್ನು ನೈಸರ್ಗಿಕವಾಗಿಯೇ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ಸಾರ್ವಜನಿಕರು, ಸರ್ಕಾರದ ಪಾತ್ರ ಅತೀ ಮುಖ್ಯ ವಾಗಿದೆ ಎಂದರು.
ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಪದಾಧಿಕಾರಿ ಗಳಾದ ಪ್ರಕಾಶ್, ರವಿ, ಗಣೇಶ್ ಸೇರಿದಂತೆ ಇತರರು ಸಾರ್ವಜನಿಕರಿಗೆ ತೀರ್ಥ ವಿತರಿಸಿದರು.