ಸೋಮವಾರಪೇಟೆ, ಡಿ. 11: ಪ್ರತಿಭಾವಂತ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಹಿಂಜರಿಕೆ ಪಡಬಾರದು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಕಿವಿಮಾತು ಹೇಳಿದರು.ತಾಲೂಕು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಬಾಲಭವನ ಸಮಿತಿ ಆಶ್ರಯದಲ್ಲಿ ಇಲ್ಲಿನ ಚೆನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭಾ ಪದರ್ಶನಕ್ಕೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಪ್ರತಿಯೊಬ್ಬ ಮಕ್ಕಳಲ್ಲೂ ಪ್ರತಿಭೆಗಳಿರುತ್ತದೆ. ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವದು ನಮ್ಮ ಕರ್ತವ್ಯವಾಗಬೇಕು. ಅದರಲ್ಲೂ ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿ ಪ್ರಮುಖವಾಗಿದೆ ಎಂದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖೋಪಾಧ್ಯಾಯಿನಿ ಅಣ್ಣಮ್ಮ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಲ್ಲೂ ಪ್ರತಿಭೆ ಇದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಬಡವರ ಮಕ್ಕಳು, ಖಾಸಗಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಕಷ್ಟವಾಗುತ್ತಿದೆ. ಹತ್ತಾರು ಜಯಂತಿಗಳ ಕೆಲಸ, ಇನ್ನಿತರ ಕಾರ್ಯಕ್ರಮಗಳಿಂದ ಶಿಕ್ಷಕರ ಸಮಯ ವ್ಯಯವಾಗುತ್ತಿದೆ. ಶಿಕ್ಷಕರು ಪಾಠ ಮಾಡುವದಕ್ಕೆ ಸೀಮಿತವಾದಾಗ ಮಕ್ಕಳ ಪ್ರತಿಯೊಂದು ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಬಹುದು. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ, ತಾಲೂಕು ಬಾಲಭವನ ಸಮಿತಿ ಸದಸ್ಯೆ ಸುಮಾ ಸುದೀಪ್, ಸಿಡಿಪಿಒ ಜಗದೀಶ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ಯಶೋದ ಮತ್ತಿತರರು ಉಪಸ್ಥಿತರಿದ್ದರು.

ಸಾಂದೀಪನಿ ಶಾಲೆಯ ಮಕ್ಕಳು ತಯಾರಿಸಿದ ಸೋಲಾರ್ ಕಳೆ ಕೊಚ್ಚುವ ಯಂತ್ರ, ಸೋಲಾರ್ ಮೋಟಾರ್ ಬೋಟ್, ಸೋಲಾರ್ ಬೈಕ್ ಗಮನಸೆಳೆಯಿತು.

ಜೇಡಿ ಮಣ್ಣಿನಲ್ಲಿ ನಿರ್ಮಿಸಿದ ಮೊಸಳೆ, ಆಮೆ, ಮಣ್ಣಿನಿಂದ ತಯಾರಿಸಿದ ವಸ್ತುಗಳು ಆಕರ್ಷಿಸಿದವು. ಜಾನಪದ ನೃತ್ಯ, ವಾದ್ಯ ಸಂಗೀತ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಏಕಪಾತ್ರಾಭಿನಯ, ಕವನವಾಚನ, ಯಕ್ಷಣಿ ಪ್ರದರ್ಶನ ನಡೆದವು.