ಸೋಮವಾರಪೇಟೆ, ಅ. 27: ಸೋಮವಾರಪೇಟೆ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ತಾಲೂಕಿನ ವಿವಿಧ ಸಂಘ - ಸಂಸ್ಥೆಗಳನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸÀಲಾಗುವದು ಎಂದು ಒಕ್ಕಲಿಗರ ಯುವ ವೇದಿಕೆ ಎಚ್ಚರಿಕೆ ನೀಡಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಸೋಮವಾರಪೇಟೆಯ ಶಾಂತಳ್ಳಿ ಹೋಬಳಿಯನ್ನು ಮಾತ್ರ ಪರಿಗಣಿಸಿ ವರದಿಯಿಂದ ಕೈ ಬಿಡಲಾಗಿದ್ದು, ಇದರಿಂದಾಗಿ ತಾಲೂಕಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಕೊಡಗಿನ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕುಗಳನ್ನು ಮಾತ್ರ ಬರಪೀಡಿತ ತಾಲೂಕೆಂದು ಘೋಷಿಸಿದ್ದು, ವಾಸ್ತವದಲ್ಲಿ ಬರ ಪರಿಸ್ಥಿತಿ ಅನುಭವಿಸುತ್ತಿರುವ ಸೋಮವಾರ ಪೇಟೆಯನ್ನು ಕೈಬಿಟ್ಟಿರುವದು ಸಮಂಜಸವಲ್ಲ. ಈ ಹಿನ್ನೆಲೆ ಸೋಮವಾರಪೇಟೆಯನ್ನೂ ಬರಪೀಡಿತ ತಾಲೂಕು ಎಂದು ಘೋಷಿಸಬೇಕೆಂದು ಆಗ್ರಹಿಸಿದರು.

ಶಾಂತಳ್ಳಿಯಲ್ಲೂ ಸಹ ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಉಳಿದಂತೆ ಇತರ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಶೇ. 50ರಷ್ಟೂ ಮಳೆ ಬಿದ್ದಿಲ್ಲ. ತಾಲೂಕಿನ ಎಲ್ಲಾ ಭಾಗಗಳನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ವರದಿ ಸಲ್ಲಿಸಿದ್ದಾರೆ. ವಾರ್ಷಿಕ 80 ಇಂಚು ಮಳೆಯಾಗುವ ಪ್ರದೇಶಗಳಲ್ಲಿ ಕೇವಲ 30 ಇಂಚಿನಷ್ಟು ಮಳೆಯಾಗಿದ್ದರೂ ಸೋಮವಾರಪೇಟೆಯನ್ನು ಕೈಬಿಟ್ಟಿರುವದು ಖಂಡನೀಯ ಎಂದರು. ತಾಲೂಕಿನ ಕೊಡ್ಲಿಪೇಟೆ, ಶನಿವಾರಸಂತೆ, ಗೌಡಳ್ಳಿ, ಆಲೂರು ಸಿದ್ದಾಪುರ, ಬಾಣಾವರ, ಅಬ್ಬೂರುಕಟ್ಟೆ, ಹೆಬ್ಬಾಲೆ, ಕೂಡಿಗೆ, ಕುಶಾಲನಗರ, ಸುಂಟಿಕೊಪ್ಪ, ಮಾದಾಪುರ ಭಾಗದಲ್ಲೂ ಮಳೆ ಇಳಿಮುಖಗೊಂಡಿದ್ದು, ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕೃಷಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ ಎಂದರು.

ನೂತನ ಬೋರ್‍ವೆಲ್‍ಗಳಿಗೂ ಅನುಮತಿ ನೀಡದ ಸರ್ಕಾರ, ಕೃಷಿ ಉದ್ದೇಶಕ್ಕೆ ಕೊರೆಸಿರುವ ಬೋರ್‍ವೆಲ್‍ಗಳಿಂದ ನೀರು ತೆಗೆಯಲೂ ಸಹ ತಡೆ ಹಾಕುತ್ತಿದೆ. ಗೌಡಳ್ಳಿ ಭಾಗದಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದ್ದು, ಇಲ್ಲಿನ ಬೋರ್‍ವೆಲ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳು ಮುಂದಾಗುತ್ತಿರುವ ಕ್ರಮ ಅಕ್ಷಮ್ಯ. ತಕ್ಷಣ ಬೋರ್‍ವೆಲ್‍ಗಳಿಂದ ನೀರು ತೆಗೆಯಲು ಅವಕಾಶ ಕಲ್ಪಿಸಬೇಕು. ನೂತನ ಬೋರ್‍ವೆಲ್‍ಗಳಿಗೆ ಅನುಮತಿ ನೀಡಬೇಕೆಂದು ಬಿ.ಜೆ. ದೀಪಕ್ ಸರ್ಕಾರವನ್ನು ಒತ್ತಾಯಿಸಿದರು.

ಗೋಷ್ಠಿಯಲ್ಲಿ ವಕ್ಕಲಿಗ ಯುವ ವೇದಿಕೆಯ ಕಾರ್ಯದರ್ಶಿ ದಯಾನಂದ್, ಉಪಾಧ್ಯಕ್ಷ ನತೀಶ್ ಮಂದಣ್ಣ, ನಿರ್ದೇಶಕ ಮಿಥುನ್, ವಸಂತ್ ಅವರುಗಳು ಉಪಸ್ಥಿತರಿದ್ದರು.