ಮಡಿಕೇರಿ, ಜ. 28: ವೀರರ ಬೀಡು, ಸೈನಿಕರ ತವರು ಎಂದು ವಿಶ್ವಭೂಪಟದಲ್ಲಿ ಖ್ಯಾತಿಗಳಿಸಿರುವ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಂದು ಸೇನಾ ಧ್ರುವತಾರೆ, ಭಾರತದ ಪ್ರಪ್ರಥಮ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 118ನೇ ಜನ್ಮ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಕೇರಳ ರಾಜ್ಯದ ಎಳಿಮಲೆಯ ಕಮಾಂಡೆಂಟ್ ನೇವಲ್ ಅಕಾಡೆಮಿಯ ವೈಸ್ ಎಡ್ಮಿರಲ್ ವೈಎಸ್‍ಎಂಎನ್‍ಎಂ ಎಸ್.ವಿ. ಭೋಕರೆ, ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಾಜಿ ಸಚಿವ ಯಂ.ಸಿ. ನಾಣಯ್ಯ, ಜಿಲ್ಲಾಧಿಕಾರಿ ಆರ್.ವಿ. ಡಿಸೋಜ, ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್ ಬಿ.ಎ. ನಂಜಪ್ಪ, ಕಾರ್ಯದರ್ಶಿ ಉಳ್ಳಿಯಡ ಪೂವಯ್ಯ, ಮತ್ತಿತರ ಪ್ರಮುಖರು ಹಾಜರಿದ್ದು, ಗೌರವ ನಮನ ಸಲ್ಲಿಸಿದರು.

ಬಳಿಕ ಬ್ಯಾಂಡ್ ಬಾರಿಸುವ ಮೂಲಕ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಫೀ.ಮಾ. ಕಾರ್ಯಪ್ಪ ಅವರ ಭಾವಚಿತ್ರ, ಎನ್‍ಸಿಸಿ ವಿದ್ಯಾರ್ಥಿಗಳು, ಸ್ಕೌಟ್ ಅಂಡ್ ಗೈಡ್ಸ್, ಸೇವಾದಳ ತಂಡಗಳು, ಕೊಡಗಿನ ವಾಲಗ, ಗೊಂಬೆ ಕುಣಿತ, ಕಂಸಾಳೆ, ಪಟ ಕುಣಿತ ತಂಡಗಳು ಪಾಲ್ಗೊಂಡು ವಿಶೇಷ ಮೆರುಗು ನೀಡಿದರು.

ಮೆರವಣಿಗೆಯ ನಂತರ ಕೋಟೆ ಆವರಣದ ಭವ್ಯ ವೇದಿಕೆಯಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು. ಶಾಸಕ ಅಪ್ಪಚ್ಚುರಂಜನ್ ಸಮಾರಂಭವನ್ನು ಉದ್ಘಾಟಿಸಿ ಸೈನಿಕರ ಕಣ್ಮಣಿ ಪುಸ್ತಕವನ್ನು ಬಿಡುಗಡೆ ಮಾಡಿದರು.

(ಮೊದಲ ಪುಟದಿಂದ) ಗಣ್ಯರು ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಫೋರಂ ವತಿಯಿಂದ ಎಸ್.ವಿ. ಭೋಕರೆ ಹಾಗೂ ಮೀನ ಭೋಕರೆ ಅವರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ನೇವಲ್ ಅಕಾಡೆಮಿಯಿಂದ ಫೋರಂಗೆ ಉಡುಗೊರೆ ನೀಡಲಾಯಿತು.

ಸ್ಪರ್ಧಾ ವಿಜೇತರು

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ವೇಳೆ ನೇವಲ್ ಅಕಾಡೆಮಿ ವೈಸ್ ಅಡ್ಮಿರಲ್ ಎಸ್.ವಿ. ಬೋಕರೆ, ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಬಹುಮಾನ ವಿತರಿಸಿದರು.

ಪ್ರೌಢ ಶಾಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನೆಲ್ಲಿಹುದಿಕೇರಿ ಎ.ವಿ. ಶಾಲೆಯ ಶಫಾನ ಪ್ರಥಮ, ಕುಶಾಲನಗರ ಫಾತಿಮಾ ಶಾಲೆಯ ದೀಪ್ತಿ ದ್ವಿತೀಯ, ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ರಿಷಿಕಾ ತೃತೀಯ, ರಾಷ್ಟ್ರಗೀತೆ ಗಾಯನದಲ್ಲಿ ಜನರಲ್ ತಿಮ್ಮಯ್ಯ ಶಾಲೆ ಪ್ರಥಮ, ಅಮ್ಮತ್ತಿ ಪ್ರೌಢಶಾಲೆ ದ್ವಿತೀಯ, ನೆಲ್ಲಿಹುದಿಕೇರಿ ಎ.ವಿ. ಶಾಲೆ ತೃತೀಯ.

ಡ್ರಿಲ್ ಹಾಗೂ ಮಾರ್ಚ್ ಪಾಸ್ಟ್‍ನಲ್ಲಿ ಜಿಪಿಯು ಮಡಿಕೇರಿ ಪ್ರಥಮ, ಕೊಡಗು ವಿದ್ಯಾಲಯ ದ್ವಿತೀಯ, ಜ. ತಿಮ್ಮಯ್ಯ ಪಬ್ಲಿಕ್ ಶಾಲೆ ತೃತೀಯ, ಪಿಯು ವಿಭಾಗದ ರಾಷ್ಟ್ರಗೀತೆ ಗಾಯನದಲ್ಲಿ ಮೂರ್ನಾಡು ಪಿಯು ಕಾಲೇಜ್ ಪ್ರಥಮ, ಡ್ರಿಲ್ ಹಾಗೂ ಮಾರ್ಚ್‍ಪಾಸ್ಟ್‍ನಲ್ಲಿ ಮೂರ್ನಾಡು ಪಿಯು ಕಾಲೇಜ್ ಪ್ರಥಮ, ಪದವಿ ವಿಭಾಗದ ರಾಷ್ಟ್ರಗೀತೆ ಗಾಯನದಲ್ಲಿ ಡ್ರಿಲ್ ಹಾಗೂ ಮಾರ್ಚ್‍ಪಾಸ್ಟ್‍ನಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಪ್ರಥಮ, ರಾಷ್ಟ್ರಗೀತೆ ಗಾಯನದಲ್ಲಿ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.

ಪೊಲೀಸ್ ಬ್ಯಾಂಡ್‍ನಿಂದ ರಾಷ್ಟ್ರಗೀತೆ, ನೇವಲ್ ಅಕಾಡೆಮಿ ಬ್ಯಾಂಡ್‍ನಿಂದ ಜೈ ಹೋ, ನಿರ್ಮಲ ಬೋಪಣ್ಣ ತಂಡದ ನಾಡಗೀತೆ ಗಮನ ಸೆಳೆಯಿತು. ಫೀ.ಮಾ. ಕಾರ್ಯಪ್ಪ ಜೀವನ ಚರಿತ್ರೆ ಕುರಿತು ಭಾವಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಇದೇ ವೇಳೆ ಮೂರ್ನಾಡು ಕಾವೇರಿ ಕೊಡವ ಸಮಾಜದಿಂದ ಉಮ್ಮತ್ತಾಟ್, ಮುಕ್ಕೋಡ್ಲು ವ್ಯಾಲಿಡ್ಯೂ ಕಲ್ಚರ್ ಅಸೋಸಿಯೇಷನ್‍ನಿಂದ ಬೊಳಕಾಟ್ ಪ್ರದರ್ಶನ ನಡೆಯಿತು. ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿ, ಕನ್ನಡ ಮತ್ತು ಸಂಸ್ಕøತಿ ಮಾಜಿ ಸಹಾಯಕ ನಿರ್ದೇಶಕ ಬಾವಿಕಟ್ಟೆ ವಂದಿಸಿದರು.