ಗೋಣಿಕೊಪ್ಪಲು, ಅ. 22: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಹಾಕಿ ನಾಕೌಟ್ ಟೂರ್ನಿಯಲ್ಲಿ ಬೇಗೂರು, ಹಾತೂರು, ಯುಎಸ್‍ಸಿ ರೆಡ್ ಹಾಗೂ ಕಾಕೋಟುಪರಂಬು ತಂಡಗಳು ಸೆಮಿಫೈನಲ್ ಪ್ರವೇಶ ಪಡೆದಿವೆ. ಬೇಗೂರು ತಂಡ ಬಿಬಿಸಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿತು. ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು. 59 ನೇ ನಿಮಿಷದಲ್ಲಿ ಅಪ್ಪಚ್ಚು ಗೋಲು ಹೊಡೆದು ಗೆಲುವು ತಂದುಕೊಟ್ಟರು. ಅಪ್ಪಚ್ಚು 33 ನೇ ನಿಮಿಷದಲ್ಲಿ ಗೋಲು ಹೊಡೆದು ಮಿಂಚಿದರು. ಬಿಬಿಸಿ ಪರ 7 ನೇ ನಿಮಿಷದಲ್ಲಿ ಸುಬ್ಬಯ್ಯ ಗೋಲು ಬಾರಿಸಿದರು.

ಹಾತೂರು ತಂಡ ಕೋಣನಕಟ್ಟೆ ತಂಡವನ್ನು 3-2 ಗೋಲುಗಳಿಂದ ಸೋಲಿಸಿತು. ಹಾತೂರು ಪರ 37 ರಲ್ಲಿ ಶಾನ್, 49 ಹಾಗೂ 58 ನೇ ನಿಮಿಷಗಳಲ್ಲಿ ಗಣಪತಿ ಗೋಲು ಹೊಡೆದರು. ಕೋಣನಕಟ್ಟೆ ಪರ 14 ರಲ್ಲಿ ಯಸ್ವಿನ್, 44 ಕ್ಕೆ ಕುಟ್ಟಪ್ಪ ಗೋಲು ಹೊಡೆದರು.

ಯುಎಸ್‍ಸಿ ರೆಡ್ ತಂಡವು ಅಮ್ಮತ್ತಿ ಈಗಲ್ಸ್ ತಂಡವನ್ನು ಶೂಟೌಟ್‍ನಲ್ಲಿ ಮಣಿಸಿ ಸೆಮಿಗೆ ಲಗ್ಗೆ ಇಟ್ಟಿತು. ರೆಡ್ ತಂಡ 4-2 ಗೋಲುಗಳಿಂದ ಜಯ ಸಾಧಿಸಿತು. ರೆಡ್ ಪರ 6 ಹಾಗೂ 56 ನೇ ನಿಮಿಷದಲ್ಲಿ ಸುಮನ್, ಶೂಟೌಟ್‍ನಲ್ಲಿ ಸುಕನ್ ಹಾಗೂ ಬೋಪಣ್ಣ, ಈಗಲ್ಸ್ ಪರ ಸಜಿ ನಾಣಯ್ಯ, ಲಾಲಾ ಅಯ್ಯಣ್ಣ ಗೋಲು ಹೊಡೆದರು.

ಕಾಕೋಟುಪರಂಬು ಹಾಗೂ ಡಾಲ್ಫಿನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಕಾಕೋಟುಪರಂಬು ತಂಡವು ಡಾಲ್ಫಿನ್ಸ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಕಾಕೋಟುಪರಂಬು ಪರ 11 ಹಾಗೂ 19 ನೇ ನಿಮಿಷಗಳಲ್ಲಿ ಪೆಮ್ಮಂಡ ಸೋಮಣ್ಣ, ಡಾಲ್ಫಿನ್ಸ್ ಪರ ಸಮಂತ್ 20 ನೇ ನಿಮಿಷದಲ್ಲಿ ಗೋಲು ಹೊಡೆದರು.

ತೀರ್ಪುಗಾರರುಗಳಾಗಿ ಬೊಳ್ಳಚಂಡ ನಾಣಯ್ಯ, ವಾಟೇರಿರ ಮೊಣ್ಣಪ್ಪ, ದಿಲನ್, ಕಾಟುಮಣಿಯಂಡ ಕಾರ್ತಿಕ್, ಗಣಪತಿ, ಚೋಯಮಾಡಂಡ ಚೆಂಗಪ್ಪ, ಅಪ್ಪಚ್ಚು, ಕೊಂಡೀರ ಕೀರ್ತಿ, ವೀಕ್ಷಕ ವಿವರಣೆಯನ್ನು ಸುಳ್ಳಿಮಾಡ ಸುಬ್ಬಯ್ಯ ಹಾಗೂ ಅಜ್ಜಮಾಡ ಪೊನ್ನಪ್ಪ ನೀಡಿದರು. ಪಂದ್ಯಾವಳಿ ನಿರ್ದೇಶಕರಾಗಿ ತೀಸಾ ಬೋಪಯ್ಯ, ತಾಂತ್ರಿಕ ವರ್ಗದಲ್ಲಿ ಗಣಪತಿ, ದರ್ಶನ್, ಹರಿಣಾಕ್ಷಿ, ಸಂತೋಷ್, ಭಾಗ್ಯಲಕ್ಷ್ಮಿ ಕಾರ್ಯನಿರ್ವಹಿಸಿದರು.