ಸೋಮವಾರಪೇಟೆ, ಜು. 28: ತಾಲೂಕಿನ ಅರಣ್ಯ ಗಡಿ ಗ್ರಾಮ ಗಳಾದ ಸೂರ್ಲಬ್ಬಿ ವ್ಯಾಪ್ತಿಯನ್ನು ವಿಶೇಷ ಆದ್ಯತಾ ವಲಯವನ್ನಾಗಿ ಘೋಷಿಸಿ ರೂ. 5 ಕೋಟಿ ವಿಶೇಷ ಪ್ಯಾಕೇಜ್ ನೀಡಲು ಕ್ರಮ ಕೈಗೊಳ್ಳ ಬೇಕೆಂದು ಗ್ರಾಮಸ್ಥರು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸೂರ್ಲಬ್ಬಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ವೀಣಾ ಅಚ್ಚಯ್ಯ ಅವರಿಗೆ ಗ್ರಾಮಸ್ಥರ ಪರವಾಗಿ ತಾಲೂಕು ಯುವ ಒಕ್ಕೂಟ ಮಾಜಿ ಅಧ್ಯಕ್ಷ ಚಾಮೇರ ದಿನೇಶ್ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿಯೇ ಅಭಿವೃದ್ಧಿ ವಂಚಿತ ಪ್ರದೇಶವೆಂಬ ಅಪವಾದಕ್ಕೆ ತುತ್ತಾಗಿರುವ ಸೂರ್ಲಬ್ಬಿ ವ್ಯಾಪ್ತಿಯ ಮಂಕ್ಯ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮುಟ್ಲು, ಹಮ್ಮಿಯಾಲ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳನ್ನು ವಿಶೇಷ ಆದ್ಯತಾ ವಲಯವನ್ನಾಗಿ ಗುರುತಿಸಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ತಕ್ಷಣ ರೂ. 5 ಕೋಟಿಗಳ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ ಬೆಳೆಯುವ ಬೆಳೆಗಳು ಅತೀವೃಷ್ಟಿ ಅಥವಾ ಅನಾವೃಷ್ಟಿಗೆ ಹಾನಿಗೊಳಗಾಗುತ್ತಿವೆ. ಅಳಿದುಳಿದ ಬೆಳೆ, ತರಕಾರಿಗಳನ್ನು ಮನೆ ಅಥವಾ ಮಾರುಕಟ್ಟೆಗೆ ಸಾಗಿಸಲು ಸೂಕ್ತ ರಸ್ತೆಯ ಕೊರತೆಯಿದೆ. ಅಭಿವೃದ್ಧಿ ಯಿಂದ ತೀರಾ ವಂಚಿತವಾಗಿರುವ ಈ ಗ್ರಾಮದಲ್ಲಿನ ಶೇ. 70 ರಷ್ಟು ಯುವ ಜನಾಂಗ ನಗರ ಪ್ರದೇಶಗಳತ್ತ ಹೋಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಜನಸಂಖ್ಯೆಯೇ ಇಲ್ಲದಾಗುತ್ತದೆ. ಈ ಹಿನ್ನೆಲೆ ತಕ್ಷಣ ಗಮನಹರಿಸಿ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಚಾಮೇರ ದಿನೇಶ್ ಮನವಿ ಮಾಡಿದರು. ಮನವಿ ಸ್ವೀಕರಿಸಿದ ವೀಣಾ ಅಚ್ಚಯ್ಯ ಅವರು, ಈ ಬಗ್ಗೆ ಖಂಡಿತಾ ಕ್ರಮ ವಹಿಸಲಾಗುವದು. ಗ್ರಾಮಸ್ಥರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವದು. ಸರ್ಕಾರದಿಂದ ರೂ. 5 ಕೋಟಿ ಪ್ಯಾಕೇಜ್ ಬಿಡುಗಡೆಗೆ ಶ್ರಮಿಸಲಾಗುವದು ಎಂದು ಭರವಸೆ ನೀಡಿದರು.