ಕುಶಾಲನಗರ, ಡಿ. 23: ಪಟ್ಟಣದಲ್ಲಿ ವಾರದ ಸಂತೆ ಮಾರುಕಟ್ಟೆ ಸ್ಥಳದಲ್ಲಿ ವಾಹನ ನಿಲುಗಡೆ ಸಮಸ್ಯೆ ಮಿತಿ ಮೀರುತ್ತಿದ್ದು, ಸಮರ್ಪಕ ನಿಲುಗಡೆಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದೆ.ಶೀಘ್ರವಾಗಿ ಬೆಳವಣಿಗೆ ಕಾಣುತ್ತಿರುವ ಪಟ್ಟಣದಲ್ಲಿ ವಾರಕ್ಕೊಮ್ಮೆ ಜರುಗುವ ತರಕಾರಿ ಸಂತೆ ಮಾರುಕಟ್ಟೆಯಲ್ಲಿ ವಿಶಾಲವಾದ ಸ್ಥಳವಿದ್ದು, ಸಮರ್ಪಕ ವಾಹನ ನಿಲುಗಡೆಯಾಗದೆ ನಾಗರಿಕರಿಗೆ ಕಿರಿಕಿರಿ ಉಂಟಾಗುತ್ತಿರುವ ಹಿನ್ನೆಲೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಮತ್ತು ವೃತ್ತ ನಿರೀಕ್ಷಕ ಕ್ಯಾತೆಗೌಡ ಮತ್ತು ಸಿಬ್ಬಂದಿಗಳು ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ನಿಲುಗಡೆಗೆ ಪ್ರತ್ಯೇಕವಾಗಿ ಜಾಗ ಗುರುತಿಸಿದರು. ಸಾರ್ವಜನಿಕರು, ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ಲಿಂಗರಾಜು, ನಗರ ಠಾಣಾಧಿಕಾರಿ ಜಗದೀಶ್, ಎಎಸ್‍ಐ ರವಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಮಂಗಳವಾರ ಸಂತೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ವ್ಯಾಪಾರಿಗಳಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಂಡ ವಿಧಿಸಿ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು. ಕುಶಾಲನಗರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣವಾಗಿಸಲು ಪಂಚಾಯಿತಿ ಆಡಳಿತ ತೀರ್ಮಾನಿಸಿದ್ದು, ಈ ಹಿನ್ನೆಲೆ ಮಾರುಕಟ್ಟೆಗೆ ಧಾಳಿ ಮಾಡಿದ ಅಧಿಕಾರಿಗಳು ಹಲವು ವ್ಯಾಪಾರಿಗಳಿಗೆ ದಂಡ ವಿಧಿಸಿದರು.