ಮಡಿಕೇರಿ, ಜು. 9: ವಿಧಾನÀ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ‘ಶಕ್ತಿ’ಗೆ ಈ ಕೆಳಗಿನ ಹೇಳಿಕೆಯಿತ್ತಿದ್ದಾರೆ.
ಡಿ.ವೈ.ಎಸ್ಪಿ ಮಾದಪಂಡ ಗಣಪತಿಯವರ ಆತ್ಮಹತ್ಯೆಯ ಹಿಂದೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಂ.ಎಸ್. ಪ್ರಸಾದ್, ಪ್ರಣಬ್ ಮೊಹಾಂತಿ ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರ ಮಾನಸಿಕ ಕಿರುಕುಳದ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಡಿ.ವೈ.ಎಸ್ಪಿ ಮಾದಪಂಡ ಗಣಪತಿ ಜಿಲ್ಲೆಯ ಖಾಸಗಿ ವಾಹಿನಿಗೆ ನೀಡಿದ ಜೀವಂತ ಸಂದರ್ಶನವೇ ಸಾಕ್ಷಿಯಾಗಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕಾಣದ ಕೈಗಳು ಪ್ರಕರಣವನ್ನು ತಿರುಚುವ ಯತ್ನ ಮಾಡುತ್ತಿವೆ. ಡಿ.ವೈ.ಎಸ್ಪಿ ಮಾದಪಂಡ ಗಣಪತಿ ಅವರ ಕುಟುಂಬ ವರ್ಗದವರಿಗೆ ಒತ್ತಡ ಹೇರಿ ಅವರ ತಂದೆ ಹಾಗೂ ಓರ್ವ ಸಹೋದರನಿಂದ ತದ್ವಿರುದ್ಧ ಹೇಳಿಕೆ ಪಡೆಯಲಾಗಿದೆ. ಆದರೆ ಅವರ ಪತ್ನಿ ಪಾವನ ಹಾಗೂ ಮಗ ನೇಹಾಲ್ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ಹಿರಿಯ ಅಧಿಕಾರಿಗಳ ಹಾಗೂ ಪ್ರಭಾವಿ ಸಚಿವರ ಮಾನಸಿಕ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವದು ಸ್ಪಷ್ಪಗೊಂಡಿದೆ.
ಕಳಂಕಿತ ಸಚಿವ ಕೆ.ಜೆÉ.ಜಾರ್ಜ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ತಕ್ಷಣ ಕೈಬಿಡಬೇಕು ಹಾಗೂ ಹಿರಿಯ ಅಧಿಕಾರಿಗಳಾದ ಎಂ.ಎಸ್. ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿ ಇವರುಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸುನಿಲ್ ಸುಬ್ರಮಣಿ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಯವರು ಸಿ.ಐ.ಡಿ. ಬದಲಿಗೆ ಈ ಪ್ರಕರಣವನ್ನು ಕೂಡಲೇ ಸಿ.ಬಿ.ಐ. ತನಿಖೆಗೆ ಒಳಪಡಿಸಲು ಒತ್ತಾಯಿಸಿದ್ದಾರೆ.