ಸುಂಟಿಕೊಪ್ಪ, ಜೂ. 18: ರಂಜಾನ್ ಹಬ್ಬಕ್ಕೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಏರ್ಪಡಿಸಲಾಯಿತು.

ಸೋಮವಾರಪೇಟೆ ಡಿವೈಎಸ್‍ಪಿ ಟಿ. ಕುಮಾರ್ ಎಲ್ಲಾ ಧರ್ಮದವರನ್ನು ಶಾಂತಿ ಸೌಹಾದರ್Àತೆ ಕಾಪಾಡಿಕೊಳ್ಳಲು ಮತ್ತು ಉಹಾಪೋಹ ವಿಚಾರಗಳಿಗೆ ಕಿವಿಕೊಡದಂತೆ ಮನವಿ ಮಾಡಿಕೊಂಡರು. ಪೊಲೀಸರೊಂದಿಗೆ ಅಪರಾಧ ಸಂಬಂಧಿಸಿದಂತೆ ಮಾಹಿತಿ ನೀಡಿದರೆ ಅನುಕೂಲವಾಗಲಿದೆ ಎಂದು ಹೇಳಿದರು. ಠಾಣಾಧಿಕಾರಿ ಅನೂಪ್ ಮಾದಪ್ಪ ಮಾತನಾಡಿ, ವರ್ತಕರು ರಾತ್ರಿ ಅಂಗಡಿಗಳಲ್ಲಿ ನಗದು ಹಾಗೂ ಮೌಲ್ಯಾಧಾರಿತವಾದ ಆಭರಣಗಳನ್ನು ಇಟ್ಟುಕೊಳ್ಳಬಾರದೆಂದು ಮನವಿ ಮಾಡಿಕೊಂಡರು.

ಸಿಸಿ ಕ್ಯಾಮರಾ ಅಳವಡಿಸಿಕೊಂಡಿರುವ ಕೆಲ ವರ್ತಕರು ರಾತ್ರಿ ವೇಳೆ ಆಫ್ ಮಾಡಿ ಹೋಗುವದರಿಂದ ಅಪರಾಧ ನಡೆದ ಸಂದರ್ಭ ಕೃತ್ಯ ಎಸಗಿದ ಆರೋಪಿಗಳು ತಪ್ಪಿಸಿಕೊಳ್ಳಲು ಇಂಬು ನೀಡಿದಂತೆ, ಸಿಸಿ ಕ್ಯಾಮರಾಗಳನ್ನು ಅಳವಡಿಸಿರುವ ಮಾಲೀಕರು ಯಾವದೇ ಕಾರಣಕ್ಕೂ ಆಫ್ ಮಾಡದಂತೆ ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯ ಕೆ.ಇ. ಕರೀಂ, ಚೇಂಬರ್ ಆಫ್ ಕಾರ್ಮಸ್ ಕಾರ್ಯದರ್ಶಿ ಸತೀಶ್ ಶೇಟ್, ಹಿರಿಯ ನಾಗರಿಕರಾದ ಎಂ.ಎ. ವಸಂತ್, ಬಿಲ್ಲವ ಸಂಘದ ಅಧ್ಯಕ್ಷ ಬಿ.ಕೆ. ಮೋಹನ್, ವಿವಿಧ ಮಸೀದಿಗಳ ಮೌಲವಿ ಹಾಗೂ ಜಮಾಅತ್ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.