ಮಡಿಕೇರಿ, ಆ. 12: ಸೀಮೆ ಎಣ್ಣೆ ಹಾಗೂ ಪಡಿತರ ಪದಾರ್ಥಗಳನ್ನು ಪಡೆಯಲು ಕೂಪನ್ ಯೋಜನೆ ಯನ್ನು ಜಿಲ್ಲಾಕೇಂದ್ರ ಹಾಗೂ ತಾಲೂಕಿನ ಪಟ್ಟಣ ಪಂಚಾಯಿತಿ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು, ಮುಂದಿನ ತಿಂಗಳಿನಿಂದ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಣೆ ಮಾಡಲಾಗುವದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ್ ನಾಯಕ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ಕಳೆದ ಜುಲೈ ತಿಂಗಳಿನಿಂದ ಸೀಮೆಎಣ್ಣೆ ಪಡೆದುಕೊಳ್ಳಲು ಕೂಪನ್ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಆಗಸ್ಟ್ ತಿಂಗಳಿನಿಂದ ಸೀಮೆಎಣ್ಣೆ ಸೇರಿದಂತೆ ಪಡಿತರ ಪದಾರ್ಥಗಳನ್ನು ಪಡೆಯಲು ಕೂಪನ್ ಯೋಜನೆಯನ್ನು ಜಿಲ್ಲಾ ಕೇಂದ್ರ ಸೇರಿದಂತೆ ಸೋಮವಾರಪೇಟೆ ಪಟ್ಟಣ, ವೀರಾಜಪೇಟೆ ಪಟ್ಟಣ ಹಾಗೂ ಕುಶಾಲನಗರ ಪಟ್ಟಣದಲ್ಲಿ ಆರಂಭಿಸಲಾಗಿದೆ. ಮುಂದಿನ ತಿಂಗಳಿನಿಂದ ಹೋಬಳಿ ಕೇಂದ್ರ, ಬಳಿಕ ಗ್ರಾ.ಪಂ. ಮಟ್ಟದಲ್ಲಿ ಕೂಪನ್ ಯೋಜನೆಯನ್ನು ಜಾರಿಗೆ ತರಲಾಗುವದು ಎಂದು ಹೇಳಿದರು.
ಸರ್ಕಾರದ ಆದೇಶದ ಪ್ರಕಾರ ಜಿಲ್ಲೆಯಲ್ಲಿ ಪ್ರತೀ ತಿಂಗಳು 31ರವರೆಗೆ ಪಡಿತರ ಪದಾರ್ಥ ಮತ್ತು ಸೀಮೆಎಣ್ಣೆ ವಿತರಣೆ ನಡೆಯುತ್ತದೆ. ಪಡಿತರ ಚೀಟಿದಾರರು ಪ್ರತೀ ತಿಂಗಳು 1ನೇ ತಾರೀಕಿನಿಂದ 25ರವರೆಗೆ ಬಯೋಸೆಂಟರ್‍ಗಳಲ್ಲಿ ಕೂಪನ್ ಪಡೆದುಕೊಳ್ಳಲು ಅವಕಾಶವಿದೆ. ಈ ಕೂಪನ್ ವ್ಯವಸ್ಥೆಯು ಪಡಿತರ ಚೀಟಿದಾರರಿಗೆ ಪೂರ್ಣವಾಗಿ ಉಚಿತವಾಗಿದ್ದು, ಸೇವಾಕೇಂದ್ರ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರವೇ ವೆಚ್ಚ ಪಾವತಿಸಲಿದೆ ಎಂದರು.
ಈ ಕೂಪನ್ ಯೋಜನೆಯಿಂದ ಸೀಮೆಎಣ್ಣೆ ಹಾಗೂ ಪಡಿತರ ಪದಾರ್ಥಗಳ ದುರುಪಯೋಗವನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಹೇಳಿದ ಅವರು ಪ್ರತೀ ತಿಂಗಳ 10ರೊಳಗೆ ಕೂಪನ್ ಪಡೆದುಕೊಳ್ಳ ಬೇಕೆಂಬ ತಪ್ಪು ಮಾಹಿತಿಯಿತ್ತು. ಪ್ರತೀ ತಿಂಗಳ 25ರೊಳಗೆ ಕೂಪನ್ ಪಡೆದುಕೊಳ್ಳಬಹುದೆಂದರು. ಮಡಿಕೇರಿ ನಗರದಲ್ಲಿ 3500 ಪಡಿತರ ಚೀಟಿದಾರರ ಪೈಕಿ ಇದುವರೆಗೆ 3200 ಪಡಿತರ ಚೀಟಿದಾರರು ಕೂಪನ್ ಪಡೆದುಕೊಂಡಿದ್ದಾರೆ ಎಂದು ಚಂದ್ರಕಾಂತ್ ನಾಯಕ್ ತಿಳಿಸಿದರು.