ಸೋಮವಾರಪೇಟೆ, ಸೆ. 21: ಕಳೆದ ಹಲವು ದಶಕಗಳಿಂದ ಕೃಷಿಕರನ್ನು ಕಾಡುತ್ತಿರುವ ಸಿ ಮತ್ತು ಡಿ ಜಾಗ ಸಮಸ್ಯೆ ಇದೀಗ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತಾರ್ತಿಕ ಅಂತ್ಯ ಕಾಣುತ್ತಿದ್ದು, ಈ ಮಧ್ಯೆ ಮಡಿಕೇರಿ ಕ್ಷೇತ್ರದ ಶಾಸಕರು ಮುಗ್ದ ರೈತರಿಂದ ಅರ್ಜಿ ಸ್ವೀಕರಿಸುವ ಮೂಲಕ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕಂದಾಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕಾಗೋಡು ತಿಮ್ಮಪ್ಪ ಅವರು ಕೊಡಗಿನ ಸಿ ಮತ್ತು ಡಿ ಜಾಗ ಸಮಸ್ಯೆ ಸೇರಿದಂತೆ ಪೈಸಾರಿ ಒತ್ತುವರಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭವೂ ಈ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.

ಈಗಾಗಲೇ ಸಲ್ಲಿಕೆಯಾಗಿರುವ ಲಕ್ಷಾಂತರ ಅರ್ಜಿಗಳ ವಿಲೇವಾರಿ ನಂತರ ನೂತನ ಅರ್ಜಿಗಳನ್ನು ಸ್ವೀಕರಿಸಲು ಸರ್ಕಾರ ಮುಂದಾಗಿದ್ದು, ಈ ಮಧ್ಯೆ ಶಾಸಕರು ರೈತರಿಗೆ ಸುಳ್ಳು ಮಾಹಿತಿ ನೀಡಿ ತಾವೇ ಅರ್ಜಿ ಸ್ವೀಕರಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಯಾವದೇ ಆದೇಶ ನೀಡದಿದ್ದರೂ ಕ್ಷುಲ್ಲಕ ರಾಜಕೀಯಕ್ಕಾಗಿ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇವರದೇ ಸರ್ಕಾರ 5 ವರ್ಷ ಅಧಿಕಾರದಲ್ಲಿ ದ್ದರೂ ಸಿ ಮತ್ತು ಡಿ ಜಾಗ ಸಮಸ್ಯೆ ಯನ್ನು ಬಗೆಹರಿಸಲು ಮುಂದಾಗದ ಶಾಸಕರು ಇದೀಗ ರಾಜಕೀಯ ಪ್ರೇರಿತರಾಗಿ ಅರ್ಜಿ ಸ್ವೀಕರಿಸುತ್ತಿದ್ದಾರೆ ಎಂದು ದೂರಿದರು.

ಈಗಾಗಲೇ ಫಾರಂ 50 ರಡಿ 1938 ಮತ್ತು ಫಾರಂ 53ರಡಿ 1500 ಅರ್ಜಿಗಳು ಸಲ್ಲಿಕೆಯಾಗಿದ್ದು, ಒಟ್ಟಾರೆ ಹಕ್ಕು ಪತ್ರಕ್ಕಾಗಿ ತಾಲೂಕಿನಲ್ಲಿ 8 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿ ಈಗಾಗಲೇ ತಾಲೂಕು ಕಚೇರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿವೆ. ಇವುಗಳನ್ನು ವಿಲೇವಾರಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಲೋಕೇಶ್ ಹೇಳಿದರು.

ಅಕ್ರಮ - ಸಕ್ರಮ ಸಮಿತಿ ಸಭೆ ಕರೆಯದೇ ಶಾಸಕರು ವೃಥಾ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಇದೀಗ ನೂತನ ಆದೇಶ ವನ್ನು ಹೊರಡಿಸಿದ್ದು, ಸಮಿತಿಯ ಕಾರ್ಯದರ್ಶಿಯಾಗಿರುವ ತಹಶೀಲ್ದಾರ್ ಅವರೇ ಸಭೆ ಕರೆಯಬೇಕಿದೆ. ಶಾಸಕರು ಸಭೆಗೆ ಗೈರುಹಾಜರಾದರೂ ಸಹ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಅರ್ಜಿ ವಿಲೇವಾರಿ ಮಾಡಬಹುದಾಗಿದೆ. ಇದೊಂದು ಸರ್ಕಾರದ ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಶಾಸಕರಿಗೆ ಕಾಯದೇ ಅಕ್ರಮ - ಸಕ್ರಮ ಸಮಿತಿ ಸಭೆ ಕರೆದು ಬಡ ರೈತರಿಗೆ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು, ವಿಲೇವಾರಿ ಮಾಡಲು ಕಂದಾಯ ಇಲಾಖೆಯ ಯಾವದೇ ಅಧಿಕಾರಿಗಳು ಹಣದ ಬೇಡಿಕೆಯಿಟ್ಟರೆ, ವಿಲೇವಾರಿಗೆ ವಿಳಂಬ ಮಾಡಿದರೆ ಸಮಿತಿಯ ಸದಸ್ಯರು ಅಥವಾ ಬ್ಲಾಕ್ ಕಾಂಗ್ರೆಸ್‍ಗೆ ಮಾಹಿತಿ ನೀಡುವಂತೆ ಲೋಕೇಶ್ ಮನವಿ ಮಾಡಿದರು.

ಅಕ್ರಮ ಸಕ್ರಮ ಸಮಿತಿಯಲ್ಲಿ ಅರ್ಜಿಗಳೇ ಇಲ್ಲ ಎಂದು ಶಾಸಕರು ಹೇಳಿಕೆ ನೀಡುತ್ತಿದ್ದು, ಸೋಮವಾರ ಪೇಟೆ ತಾಲೂಕು ಕಚೇರಿಯಲ್ಲಿಯೇ 100ಕ್ಕೂ ಅಧಿಕ ಅರ್ಜಿಗಳು ವಿಚಾರಣೆಗೆ ಸಿದ್ದವಿದೆ. ಆದರೂ ಶಾಸಕರು ಸಮಿತಿ ಸಭೆ ಕರೆಯುತ್ತಿಲ್ಲ. ಇದರಿಂದ ಶಾಸಕರಿಗೆ ಬಡ ರೈತರ ಮೇಲೆ ಇರುವ ಕಾಳಜಿ ತಿಳಿಯುತ್ತಿದೆ ಎಂದು ಲೋಕೇಶ್ ವ್ಯಂಗ್ಯವಾಡಿದರು. ಇದೀಗ ಕ್ಷೇತ್ರವಾರು ಸಮಿತಿ ರಚನೆಯಾಗಿದ್ದು, ತಾಲೂಕು ಮಟ್ಟದಲ್ಲಿಯೇ ಅರ್ಜಿಗಳ ವಿಚಾರಣೆಗೆ ಸಮಿತಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಅಕ್ರಮ - ಸಕ್ರಮ ಸಮಿತಿ ಸದಸ್ಯ ಹೆಚ್.ಸಿ. ನಾಗೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಂದಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಪ್ರಮುಖರಾದ ಪ್ರಸನ್ನ ಅವರುಗಳು ಉಪಸ್ಥಿತರಿದ್ದರು.