ಸುಂಟಿಕೊಪ್ಪ, ಜು. 25: ಕೆದಕಲ್ ಗ್ರಾ. ಪಂ.ಯ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಮತ್ತು ಜಲಾನಯನ ಇಲಾಖೆಯ ವತಿಯಿಂದ ಉಚಿತ ಸಿಲ್ವರ್ ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಕೆದಕಲ್ ಗ್ರಾ. ಪಂ. ಅಧ್ಯಕ್ಷ ಬಿ.ಎ. ಬಾಲಕೃಷ್ಣ ರೈ, ಉಚಿತವಾಗಿ ನೀಡಿರುವ ಸಿಲ್ವರ್ ಗಿಡಗಳನ್ನು ಉತ್ತಮ ರೀತಿಯಲ್ಲಿ ಪೋಷಿಸಿ ಬೆಳೆಸಬೇಕು ಎಂದರು. ಕಡಿಮೆ ಖರ್ಚಿನಲ್ಲಿ ಬೆಳೆಯುವ ಈ ಗಿಡಗಳು ಕಾಫಿ ಗಿಡಗಳಿಗೆ ಬಿಸಿಲಿನಿಂದ ರಕ್ಷಣೆ ನೀಡುವದಲ್ಲದೇ ಹೆಮ್ಮರವಾಗಿ ಬೆಳೆಯುತ್ತದೆ ಎಂದರು. ಕೆದಕಲ್ ಗ್ರಾ. ಪಂ. ಯ ಅಭಿವೃದ್ಧಿ ಅಧಿಕಾರಿ ವೀಣಾ, ಗ್ರಾ. ಪಂ. ಸದಸ್ಯ ಬಿ.ಎಂ. ವೆಂಕಪ್ಪ ಪೂಜಾರಿ, ಜಲಾನಯನ ಇಲಾಖೆಯ ಉದಯ ಪ್ರಕಾಶ್, ಅರಣ್ಯ ವಲಯಾಧಿಕಾರಿ ಬಸವೇಶ್ವರ, ಅರಣ್ಯಧಿಕಾರಿ ಮಲ್ಲೇಶ್ ಉಪಸ್ಥಿತರಿದ್ದರು.