* ಸಿದ್ದಾಪುರ, ಆ. 2: ಸಿದ್ದಾಪುರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಎಂ.ಕೆ ಮಣಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿನ ಕಾಮಗಾರಿಗಳ ಕ್ರಿಯಾ ಯೋಜನೆಯ ಪಟ್ಟಿಯನ್ನು ಅನುಮತಿಗಾಗಿ ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಯಾವದಕ್ಕೂ ಕಿಂಚಿತ್ತು ಬೆಲೆ ನೀಡದ ಅಧಿಕಾರಿ ಅನುಮತಿ ನೀಡದಿರುವದು ಸಭೆಯಲ್ಲಿ ಸದಸ್ಯರನ್ನು ಕೆರಳಿಸಿದಲ್ಲದೆ ಕೇವಲ ಮೀನು ಮಾರಾಟದ ಕುರಿತು ಆದೇಶ ನೀಡುವ ಹಿರಿಯ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಬಗ್ಗೆ ಯಾಕೆ ಆಸಕ್ತಿ ತೋರುತ್ತಿಲ್ಲವೆಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.

ಗೊಂದಲವನ್ನು ಆಲಿಸಿದ ಅಧ್ಯಕ್ಷರು ವಿಷಯದ ಬಗ್ಗೆ ನಮ್ಮಲ್ಲಿ ಗೊಂದಲ ಏಕೆ? ಪತ್ರ ವ್ಯವಹಾರ ಮಾಡೋಣ, ಅಥವಾ ಅಧಿಕಾರಿಗಳ ಬಳಿ ತೆರಳಿ ಮನವರಿಕೆ ಮಾಡೋಣ, ಸಮ್ಮತಿಸದಿದ್ದಲ್ಲಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡೋಣವೆಂದು ಸದಸ್ಯರನ್ನು ಸಮಾಧಾನ ಪಡಿಸಿದರು.

ಸಿದ್ದಾಪುರ ಪಟ್ಟಣದಲ್ಲಿ ಶ್ರೀಮಂತರು ಎರಡು,ಮೂರು ಅಂತಸ್ತಿನ ಕಟ್ಟಡಗಳನ್ನು ಕಟ್ಟಿಕೊಂಡಿದ್ದು, ಇವರಲ್ಲಿ ಅನೇಕರು ಮನೆಗಳಾಗಿ ಬಾಡಿಗೆಗೆ ನೀಡಿದ್ದಾರೆ ,ಇವರಿಂದ ಎಷ್ಟು ಪ್ರಮಾಣದಲ್ಲಿ ಕಂದಾಯ ನಿಗದಿಪಡಿಸಲಾಗಿದೆ.

ವಸತಿಯಿಲ್ಲದ ಬಡವರು ಮನೆ ಕಟ್ಟಲು ಮುಂದಾದಾಗ ಅನುಮತಿ ನೀಡಲು ಕಂದಾಯದ ವಸೂಲಾತಿಗೆ ಇಲ್ಲಸಲ್ಲದ ನಿಯಮಗಳನ್ನು ಹೇರುವದು ಸರಿಯಾದ ಕ್ರಮವಲ್ಲ, ಶ್ರೀಮಂತರಿಗೊಂದು, ಬಡವರಿ ಗೊಂದು ಕಾನೂನು ಬೇಡ ಎಂದು ಸದಸ್ಯ ಶೌಕತ್ ಅಲಿ ಸಭೆಯಲ್ಲಿ ಹೇಳಿದರು. ಅಭಿವೃದ್ಧಿ ಅಧಿಕಾರಿ ಕಾನೂನು ಎಲ್ಲರಿಗೂ ಒಂದೆ, ಕಂದಾಯ ಪಾವತಿ ಬಗ್ಗೆ ಯಾವದೇ ತಾರತಮ್ಯ ಮಾಡುತ್ತಿಲ್ಲವೆಂದು ಹೇಳಿದರು. ಕಳೆದ 20.10.2014ರಂದು ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಲೆಕ್ಕ ಪರಿಶೋಧಕ ಅಧಿಕಾರಿಗಳ ತಂಡ, ಪಂಚಾಯಿತಿಯಲ್ಲಿನ ಲೆಕ್ಕ ಪರಿಶಿಲನೆ ನಡೆಸಿದ್ದಾರೆ, ಸ್ಧಳೀಯ ಆರೇಂಜ್ ಕೌಂಟಿ ರೆಸಾರ್ಟ್‍ನಿಂದ ಸಿದ್ದಾಪುರ ಗ್ರಾಮ ಪಂಚಾಯಿತಿಗೆ 14 ಕೋಟಿ ಹಣ ತೆರಿಗೆ ರೂಪದಲ್ಲಿ ಸಂಗ್ರಹÀವಾಗಬೇಕಾಗಿದೆ. ಪಂಚಾಯಿತಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನು ನೀಡಿದೆ. ಪಂಚಾಯಿತಿಯ ಅಧಿಕಾರಿ ಸಂಬಂಧಪಟ್ಟ ಕಡತವನ್ನು ಸಾಮಾನ್ಯ ಸಭೆಗೂ ಮಂಡಿಸದೆ, ಮಾಹಿತಿಯು ನೀಡದೆ. ಆಡಳಿತ ಮಂಡಳಿಯನ್ನು ಕತ್ತಲೆಯಲ್ಲಿಟ್ಟಿದ್ದಾರೆ. ಕಡತಗಳನ್ನು ಹುಡುಕಿ ಸಭೆಗೆ ಮಂಡಿಸಿ ಎಂದು ಸದಸ್ಯ ಹುಸೈನ್ ಒತ್ತಾಯಿಸಿದರು. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಈ ವೇಳೆ ಮಾತನಾಡಿ, ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು, ಕಡತಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತಿಳಿಸುವದಾಗಿ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸದಸ್ಯತ್ವ ಹಾಗೂ ಆದಾಯದಲ್ಲೂ ಅಧಿಕವಾಗಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಯಾಗಿದ್ದು, ಇಲ್ಲಿಗೆ ಬಂದಿರುವ ನೂತನ ಅಭಿವದ್ಧಿ ಅಧಿಕಾರಿ ವಾರದಲ್ಲಿ ಮೂರು ದಿನ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಸೇವೆ ಮಾಡುತ್ತಿದ್ದಾರೆ, ಎರಡು ಪಂಚಾಯಿತಿ ನಿರ್ವಹಣೆಯಿಂದ ಸಿದ್ದಾಪುರ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸಗಳು ಸಿಗುತ್ತಿಲ್ಲ, ಅಭಿವೃದ್ಧಿ ಅಧಿಕಾರಿಯನ್ನು ಜಿಲ್ಲಾಡಳಿತ, ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಮಾಡುವಂತೆ, ಸದಸ್ಯ ರೆಜೀತ್ ಕುಮಾರ್ ಪ್ರಸ್ತಾಪಿಸುತ್ತಿದಂತೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿ ನಿರ್ಣಯ ಬರೆದು ಕೊಳ್ಳುವಂತೆ ತಿಳಿಸಿದರು. ತಾಲೂಕು ಪಂಚಾಯಿತಿ ಸದಸ್ಯೆ ಚಿನ್ನಮ್ಮ, ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಕಾರ್ಯದರ್ಶಿ ಗುರು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

-ಅಂಚೆಮನೆ ಸುಧಿ