ಸಿದ್ದಾಪುರ, ನ. 14: ಕಳೆದ ಕೆಲವು ತಿಂಗಳಿನಿಂದ ತೋಟದೊಳಗೆ ಬೀಡು ಬಿಟ್ಟು ಕಾರ್ಮಿಕರನ್ನು ಬಲಿ ತೆಗೆದುಕೊಳ್ಳುತ್ತಿದ್ದ ಪುಂಡಾನೆ ಯೊಂದನ್ನು ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟದೊಳಗೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.ಸಿದ್ದಾಪುರ ಸುತ್ತಮುತ್ತಲಿನ ಕಾಫಿ ತೋಟದೊಳಗೆ ಬೀಡುಬಿಟ್ಟಿದ್ದ ಪುಂಡಾನೆಗಳು, ಕಾರ್ಮಿಕರ ಮೇಲೆ ಧಾಳಿ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಹಾಗೂ ಜನಪ್ರತಿನಿಧಿಗಳು ಪ್ರತಿಭಟನೆ ಮಾಡುವ ಮೂಲಕ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದ ಮೇರೆಗೆ ಅರಣ್ಯ ಇಲಾಖೆಯು ಪುಂಡಾನೆಗಳನ್ನು ಹಿಡಿಯಲು ಪ್ರಸ್ತಾವನೆಯನ್ನು ಕಳುಹಿಸಿದ್ದರು. ಸರ್ಕಾರದಿಂದ 4 ಕಾಡಾನೆಗಳನ್ನು ಹಿಡಿಯಲು ಅನುಮತಿ ನೀಡಲಾಗಿತ್ತು. ಕಳೆದ 3 ದಿನಗಳಿಂದ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಿದ್ದಾಪುರ ವ್ಯಾಪ್ತಿಯ ಟಾಟಾ ಕಂಪೆನಿಗೆ ಸೇರಿದ ಎಮ್ಮೆಗುಂಡಿ ತೋಟ ಹಾಗೂ ಬಿಬಿಟಿಸಿ ಕಂಪೆನಿಗೆ ಸೇರಿದ ಬೀಟಿಕಾಡು, ಬಾಡಗ, ಬಾಣಂಗಾಲ ಕಾಫಿ ತೋಟಗಳಲ್ಲಿ ಸಾಕಾನೆಗಳ ನೆರವಿನಿಂದ ಕಾರ್ಯಾ ಚರಣೆ ಕೈಗೊಂಡಿದ್ದರು.