ಶ್ರೀಮಂಗಲ, ಜು. 10: ಡಿ.ವೈ.ಎಸ್. ಪಿ ಎಂ.ಕೆ . ಗಣಪತಿ ಆತ್ಮ ಹತ್ಯೆಗೆ ಸಚಿವ ಕೆ.ಜೆ. ಜಾರ್ಜ್ ಹಾಗೂ ಗುಪ್ತದಳದ ಎ.ಡಿ.ಜಿ.ಪಿ ಎ. ಎಂ. ಪ್ರಸಾದ್ , ಲೋಕಾಯುಕ್ತ ಡಿ.ಜಿ.ಪಿ ಪ್ರಣವ್ ಮೊಹಂತಿ ಅವರ ಕಿರುಕುಳ ಕಾರಣವೆಂದು ಆರೋಪವಿರುವಾಗ ಇವರನ್ನು ಸರಕಾರ ರಕ್ಷಣೆ ಮಾಡುವ ಉದ್ದೇಶದಿಂದ ಸಿಐಡಿ ತನಿಖೆಗೆ ಒಪ್ಪಿಸಿದ್ದು ಕೇವಲ ಜನರ ಕಣ್ಣೊರೆಸುವ ತಂತ್ರವಾಗಿದೆ. ರಾಜ್ಯ ಸರಕಾರದ ಅಧೀನದಲ್ಲಿರುವ ಸಿ.ಐ.ಡಿ ಅಧಿಕಾರಿಗಳ ಮೇಲೆ ಸರಕಾರ ಪ್ರಭಾವ ಬೀರುವದು ನಿಶ್ಚಿತವಾಗಿದೆ. ಇದರಿಂದ ಸತ್ಯ ಹೊರಬೀಳುವದಿಲ್ಲವೆಂದು ಜಿಲ್ಲಾ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಕರಣ ನಡೆದ ತಕ್ಷಣ ಸಚಿವ ಕೆ.ಜೆ ಜಾರ್ಜ್ ಅವರ ಪಾತ್ರವಿಲ್ಲವೆಂದು ಮುಖ್ಯಮಂತ್ರಿ, ಹಾಗೂ ಗೃಹ ಸಚಿವರು ಹೇಳಿಕೆ ನೀಡಿರುವಾಗ, ಸಿ.ಐ.ಡಿ ತಂಡದಿಂದ ಸತ್ಯ ಹೊರಬೀಳುವದು ಸಾಧ್ಯವಿಲ್ಲ. ರಾಜ್ಯ ಸರಕಾರ ಆರೋಪ ಎದುರಿಸುತ್ತಿರುವ ಸಚಿವ ಹಾಗೂ ಉನ್ನತಾಧಿಕಾರಿಗಳನ್ನು ರಕ್ಷಿಸುವ ಪೂರ್ವ ನಿರ್ಧರಿತ ವರದಿಯನ್ನು ನೀಡುವಂತೆ ಸಿ.ಐ.ಡಿ ತಂಡದ ಮೇಲೆ ಒತ್ತಡವಿದೆ. ಆದ್ದರಿಂದ ಈ ಪ್ರಕರಣವನ್ನು ಸಿ.ಬಿ.ಐ ಗೆ ಒಪ್ಪಿಸಿ ನಿಷ್ಪಕ್ಷಪಾತವಾದ ತನಿಖೆ ನಡೆಸಲು ಆಗ್ರಹಿಸಿದ್ದಾರೆ.