ಮಡಿಕೇರಿ, ಜು. 8: ಡಿವೈಎಸ್‍ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ತನಿಖೆಗೆ ಸಿಐಡಿ ವಿಭಾಗಕ್ಕೆ ಮುಖ್ಯಮಂತ್ರಿ ಎಸ್.ಜಿ. ಸಿದ್ದರಾಮಯ್ಯ ಒಪ್ಪಿಸಿದ್ದು, ಇಂದು ಜಿಲ್ಲೆಗೆ ಸಿಐಡಿ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಹೇಮಂತ್ ನಿಂಬಾಳ್ಕರ್ ಆಗಮಿಸಿದ್ದಾರೆ. ಸಿಐಡಿ ಎಸ್‍ಪಿ ಕುಮಾರಸ್ವಾಮಿ ಬೆಳಗ್ಗೆಯೆ ಆಗಮಿಸಿ ಗಣಪತಿ ಅವರ ಅಂತ್ಯಕ್ರಿಯೆ ಸಂದರ್ಭವೂ ಹಾಜರಿದ್ದರು.

‘ಶಕ್ತಿ’ಯೊಂದಿಗೆ ಮಾತನಾಡಿದ ನಿಂಬಾಳ್ಕರ್ ತನಿಖೆ ಈಗಿನಿಂದಲೇ ಆರಂಭಿಸುತ್ತಿದ್ದೇವೆ ಎಂದರು. ನಿಷ್ಪಕ್ಷಪಾತ ತನಿಖೆ ನಡೆಯಲಿರುವದಾಗಿ ಹೇಳಿದರು.

ಸಂಜೆ ವೇಳೆ ಮಡಿಕೇರಿಗೆ ತಲಪಿದ ನಿಂಬಾಳ್ಕರ್, ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ಅವರಿಂದ ಘಟನೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದರು. ಬಳಿಕ ಆತ್ಮಹತ್ಯೆ ನಡೆದ ಹೊಟೇಲ್‍ಗೆ ತೆರಳಿ ಕೋಣೆಯನ್ನು ಪರಿಶೀಲಿಸಿ ಸಂಬಂಧಿಸಿದವರ ಹೇಳಿಕೆಗಳನ್ನು ಪಡೆದರು. ಇವರೊಂದಿಗೆ ಸಿಐಡಿ ಎಸ್‍ಪಿ ಕುಮಾರಸ್ವಾಮಿ ಹಾಗೂ ಇಬ್ಬರು ಡಿವೈಎಸ್ ಪಿಗಳಿದ್ದರು.

ಪಾರದರ್ಶಕ ಮಹಜರು

‘ಶಕ್ತಿ’ಯೊಂದಿಗೆ ಮಾತನಾಡಿದ ಎಸ್‍ಪಿ ರಾಜೇಂದ್ರ ಪ್ರಸಾದ್ ಪ್ರಕರಣದ ಪ್ರಾಥಮಿಕ ಮಹಜರನ್ನು ಪಾರದರ್ಶಕವಾಗಿ ಮಾಡಿದ್ದೇವೆ ಎಂದರು. ಆತ್ಮಹತ್ಯೆ ವಿನಾಯಕ ಲಾಡ್ಜಿನ ಮೂರನೇ ಮಹಡಿಯ ಕೋಣೆಯಲ್ಲಿ ಮಾಡಿಕೊಳ್ಳಲಾಗಿತ್ತು.

ಆತ್ಮಹತ್ಯೆಯ ದೃಶ್ಯವನ್ನು ಕಿಟಕಿಯಿಂದಷ್ಟೇ ನೋಡಲಾಗಿತ್ತು. ಎಸ್‍ಪಿ ಸಹಿತ ಪೊಲೀಸ್ ತಂಡ ಮೃತರ ತಂದೆ ಕುಶಾಲಪ್ಪ ಹಾಗೂ ಸಹೋದರ ಸತೀಶ್ ಬರುವ ತನಕ ಕೋಣೆಯ ಬಾಗಿಲು ಒಡೆಯಲಿಲ್ಲ. ಅವರು ಬಂದ ಬಳಿಕ ಹೊಟೇಲ್ ಸಿಬ್ಬಂದಿಯ ಮೂಲಕ ಬಾಗಿಲು ಒಡೆಸಲಾಯಿತು. ಕೋಣೆಯೊಳಗೆ ಪ್ರಥಮವಾಗಿ ಎಸ್‍ಪಿ, ಕುಶಾಲಪ್ಪ, ಸತೀಶ್, ಫೋಟೋ ಗ್ರಾಫರ್, ವೀಡಿಯೋ ಗ್ರಾಫರ್, ಪಂಚನಾಮ ಬರೆಯುವವರು, ತನಿಖಾಧಿಕಾರಿ ಮಾತ್ರ ಒಳಗೆ ತೆರಳಿ ಮಹಜರು ನಡೆಸಿದರು. ಸಮವಸ್ತ್ರದೊಂದಿಗೆ ಹಗ್ಗದಿಂದ ನೇಣು ಹಾಕಿಕೊಂಡಿದ್ದ ಶರೀರ ಇಳಿಸಲಾಯಿತು. ಕೋಣೆಗೊಳಗಾಗಲಿ, ಜೇಬಿನಲ್ಲಾಗಲಿ, ಎಲ್ಲಿಯೂ ಮೃತರ ಮರಣ ಪತ್ರ ಬರೆದು ಇರಿಸಿರಲಿಲ್ಲ ಎಂದು ಎಸ್‍ಪಿ ರಾಜೇಂದ್ರ ಪ್ರಸಾದ್ ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದರು. ಆದರೆ ಹಾಸಿಗೆಗೆ ತನ್ನ ಪಿಸ್ತೂಲಿನಿಂದ ಗಣಪತಿ ಎರಡು ಗುಂಡು ಹಾರಿಸಿದ್ದಾರೆ. ಬಹುಶಃ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲೂ ಯತ್ನಿಸಿ, ಮನ ಬದಲಿಸಿರಬೇಕು.

(ಮೊದಲ ಪುಟದಿಂದ)

ಮೇದಪ್ಪಗೆ ಕಂಡ ಶವ

ಡಿವೈಎಸ್‍ಪಿ ಗಣಪತಿ ನಿನ್ನೆ ದಿನ ಮಂಗಳೂರಿನಿಂದ ಮಡಿಕೇರಿಗೆ ಬಸ್‍ನಲ್ಲಿ ಮಫ್ತಿಯಲ್ಲಿ ಬಂದಿದ್ದಾರೆ. 10.45ರ ಹೊತ್ತಿಗೆ ನೇರವಾಗಿ ವಿನಾಯಕ ಲಾಡ್ಜಿಗೆ ತೆರಳಿದ್ದಾರೆ. ಕೋಣೆಯಲ್ಲಿ ಸಮವಸ್ತ್ರ ಧರಿಸಿ ಬಿ.ಟಿ.ವಿ. ಕಚೇರಿಗೆ ತೆರಳಿದ್ದಾರೆ. ಅಲ್ಲಿ ಯಾರೂ ಇರಲಿಲ್ಲವೆಂದು ಟಿ.ವಿ. 1ಗೆ ತೆರಳಿದ್ದಾರೆ. ಅಲ್ಲಿ ತನ್ನ ಹೇಳಿಕೆಯನ್ನು ರೆಕಾರ್ಡ್ ಮಾಡಿಸಿದ್ದಾರೆ. ಈ ಸಂದರ್ಭ ಬಿ.ಟಿ.ವಿ. ಹಾಗೂ ಇ.ಟಿವಿಯವರೂ ರೆಕಾರ್ಡಿಂಗ್ ಮಾಡಿದ್ದಾರೆ.

ಗೋಪಾಲ್ ಎಂಬ ಪತ್ರಕರ್ತ ಮಧ್ಯಾಹ್ನದ ವೇಳೆ ಇನ್ಸ್‍ಪೆಕ್ಟರ್ ಮೇದಪ್ಪ ಅವರ ಬಳಿ ಗಣಪತಿ ಅವರು ಬಂದಿದ್ದ ಕುರಿತು ಹೇಳಿದ್ದಾರೆ. ರಾತ್ರಿ 8 ಗಂಟೆಗೆ ಗಣಪತಿ ಅವರ ಸಂಭಾಷಣೆ ಬಿತ್ತರವಾಗಲಾರಂಭಿಸಿದೆ. ಕೂಡಲೇ ಬೆಂಗಳೂರು ರಾಮನಗರದಲ್ಲಿ ಡಿವೈಎಸ್‍ಪಿ ಆಗಿರುವ ಗಣಪತಿ ಅವರ ಸಹೋದರ ತಮ್ಮಯ್ಯ ಅವರಿಗೆ ಯಾರೊ ಕರೆ ಮಾಡಿ ಈ ರೀತಿ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಗಣಪತಿ ಅವರನ್ನು ಸಂಪರ್ಕಿಸಲು ತಮ್ಮಯ್ಯ ಹಲವು ಬಾರಿ ಕರೆ ಮಾಡಿದ್ದಾರೆ. ಕರೆ ಸ್ವೀಕಾರ ಆಗದಿದ್ದಾಗ ಮೇದಪ್ಪ ಅವರಿಗೆ ಕರೆ ಮಾಡಿ ಸಂಶಯ ವ್ಯಕ್ತಪಡಿಸಿದ್ದಾರೆ. ತನಿಖೆ ಮಾಡಿದ ಮೇದಪ್ಪ ಅವರಿಗೆ ವಿನಾಯಕ ಲಾಡ್ಜಿನಲ್ಲಿ ಗಣಪತಿ ಇರುವ ಕುರುಹು ದೊರೆಯಿತು. ಕೋಣೆಗೆ ಹೋಗಿ ಬಾಗಿಲು ಬಡಿದರೂ ಉತ್ತರ ಬರಲಿಲ್ಲ. ಬಳಿಕ ಸ್ಲೈಡಿಂಗ್ ಕಿಟಕಿಯನ್ನು ಸರಿಸಿ ನೋಡುವಾಗ ಗಣಪತಿ ಫ್ಯಾನ್‍ಗೆ ಬಿಗಿದ ಹಗ್ಗದಿಂದ ತೂಗಾಡುತ್ತಿದ್ದ ದೃಶ್ಯ ಕಂಡಿತು. ಪ್ರಥಮ ತನಿಖೆ ಹೀಗೆ ಆರಂಭವಾಗಿದೆ.